ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು- ಸಂಯಮ, ಉತ್ತಮ ನಾಯಕತ್ವ ಗುಣ, ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕೊಡಗು ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸ್ಕೌಟ್ ಮತ್ತು ಗೈಡ್ ಸಹಕಾರಿಯಾಗಿದೆ ಎಂದರು.ವಿದ್ಯಾರ್ಥಿ ಸಮುದಾಯದಲ್ಲಿ ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.
ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲಾ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳಲು ಮುಂದಾಗಬೇಕು ಎಂದು ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.
ಎಲ್ಲಾ ಶಾಲೆಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್‌ನ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಬಾಲಕರು ಮತ್ತು ಬಾಲಕಿಯರಿಗಾಗಿ ಸ್ವಯಂಪ್ರೇರಿತರಾಗಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ ಶೈಕ್ಷಣಿಕ ಆಂದೋಲನವಾಗಿದೆ. ಇದು ಜನಾಂಗ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿ ಬದುಕುವ ಹಾಗೂ ಸಹಬಾಳ್ವೆ ಜೀವನ ನಡೆಸುವ ಚಳವಳಿಯಾಗಿ ರೂಪುಗೊಂಡಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳು ವಿಶ್ವಶಾಂತಿ ಸ್ಥಾಪನೆಗೆ ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಪಿ.ಜಿ.ಆರ್.ಸಿಂಧ್ಯಾ ಹೇಳಿದರು.ಜಿಲ್ಲೆಯಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್‌ನ ಚಟುವಟಿಕೆಗಳ ಕುರಿತು ಶ್ಲಾಘಿಸಿದರು
ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಕುಶಾಲನಗರ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಇದೇ ಮೊದಲ ಬಾರಿ ಕೊಡಗು ಜಿಲ್ಲೆಯಲ್ಲಿ ಮಕ್ಕಳ ಮೇಳವನ್ನು ಯಶಸ್ವಿಯಾಗಿ ಸಂಘಟಿಸಲಾಗಿದ್ದು, ಜಿಲ್ಲೆಯ 500 ಕ್ಕೂ ಹೆಚ್ಚು ಮಕ್ಕಳು ಈ ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಸ್ಪರ ಸ್ನೇಹಪರತೆ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಸಹಕಾರಿಯಾಗಿದೆ ಎಂದರು.ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಸ್ಕೌಟ್ಸ್, ಗೈಡ್ಸ್ ನ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಮಕ್ಕಳ ಮೇಳದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಮಕ್ಕಳ ಮೇಳದ ಉದ್ದೇಶ ತಿಳಿಸಿದರು.ಗೈಡ್ಸ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಶ್ರೀ ರಂಗರಾವ್ ಪ್ರಶಸ್ತಿಗೆ ಭಾಜನರಾದ ರಾಷ್ಟ್ರೀಯ ಗೈಡ್ಸ್ ತರಬೇತಿ ಕೇಂದ್ರದ ನಿವೃತ್ತ ಉಪ ನಿರ್ದೇಶಕಿ ಮಾಚಮ್ಮ, ಸಂಸ್ಥೆಯ ಜಿಲ್ಲಾ ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಧನಂಜಯ ಸೇರಿದಂತೆ ಉತ್ತಮ ಸೇವೆ ಸಲ್ಲಿಸಿದ ರೇಂಜರ್ ಮತ್ತು ರೋವರ್ಸ್ ಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಂಸ್ಥೆಯ ಗೈಡ್ಸ್ ವಿಭಾಗದ ಆಯುಕ್ತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಜಿಲ್ಲಾ ತರಬೇತಿ ಆಯುಕ್ತರಾದ ಕೆ.ಯು.ರಂಜಿತ್, ಮೈಥಿಲಿರಾವ್, ಜಿಲ್ಲಾ ಸಂಸ್ಥೆಯಕಾರ್ಯದರ್ಶಿ ವಸಂತಿ, ಸಹ ಕಾರ್ಯದರ್ಶಿ ಹರಿಣಿ ವಿಜಯ್, ಖಜಾಂಚಿ ಮುದ್ದಯ್ಯ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಂ.ತಮ್ಮಯ್ಯ, ಉಪಾಧ್ಯಕ್ಷರಾದ ಕೆ.ವಿ.ಅರುಣ್, ಕೆ.ಪಿ.ರಾಜು, ಕಾರ್ಯದರ್ಶಿ ಎಂ.ಎಸ್.ಗಣೇಶ್, ಗೈಡ್ಸ್ ಸಂಸ್ಥೆಯ ಪ್ರಮುಖರಾದ ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಉಷಾರಾಣಿ, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕಿ ಸುಕುಮಾರಿ, ಪ್ರೌಢಶಾಲೆ ಮುಖ್ಯ ಉಪಾಧ್ಯಾಯರಾದ ಬಿ ಎನ್ ಪುಷ್ಪ, ಪಿ.ಎಂ.ಶ್ರೀ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಸ್. ಚಂದನ್ ಕುಮಾರ್, ಮುಖ್ಯ ಶಿಕ್ಷಕಿ ಎಂ.ಎಂ.ಭಾರತಿ, ಸಿ.ಆರ್.ಪಿ.ಗಳಾದ ಟಿ.ಈ.ವಿಶ್ವನಾಥ್, ಶೃತಿ ಸೇರಿದಂತೆ ಸಂಸ್ಥೆಯ ವಿವಿಧ ಹಂತದ ಪದಾಧಿಕಾರಿಗಳು ಮತ್ತಿತರರು ಇದ್ದರು.
ಮಕ್ಕಳ ಮೇಳದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು.