ಮಾನವೀಯತೆ ಮೆರೆದ ಆ್ಯಂಬುಲೆನ್ಸ್ ಚಾಲಕರು

| Published : Jul 04 2024, 01:04 AM IST

ಮಾನವೀಯತೆ ಮೆರೆದ ಆ್ಯಂಬುಲೆನ್ಸ್ ಚಾಲಕರು
Share this Article
  • FB
  • TW
  • Linkdin
  • Email

ಸಾರಾಂಶ

ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 22 ದಿನಗಳ ಹಸುಗೂಸನ್ನು ಆ್ಯಂಬುಲೆನ್ಸ್ ಚಾಲಕರು ಸೇರಿಕೊಂಡು ಕೇವಲ ಐದು ಗಂಟೆಯಲ್ಲಿ ಬೆಂಗಳೂರು ತಲುಪಿಸಿ, ಮಗುವಿಗೆ ಸೂಕ್ತಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೃದಯ ಸಮಸ್ಯೆಯುಳ್ಳ 22 ದಿನದ ಮಗುವನ್ನು ಬೆಂಗಳೂರು ತಲುಪಿಸಿ, ಜೀವ ಉಳಿಸಿದರು

ಆ್ಯಂಬುಲೆನ್ಸ್ ಗೆ ಆ್ಯಂಬುಲೆನ್ಸ್ ವಾಹನವೇ ಬೆಂಗಾವಲು, ಜೀವ ಉಳಿಸಲು ವಿನೂತನ ಪ್ರಯತ್ನ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 22 ದಿನಗಳ ಹಸುಗೂಸನ್ನು ಆ್ಯಂಬುಲೆನ್ಸ್ ಚಾಲಕರು ಸೇರಿಕೊಂಡು ಕೇವಲ ಐದು ಗಂಟೆಯಲ್ಲಿ ಬೆಂಗಳೂರು ತಲುಪಿಸಿ, ಮಗುವಿಗೆ ಸೂಕ್ತಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಕ್ಕಾಗಿ ಬರೋಬ್ಬರಿ 9 ಆ್ಯಂಬುಲೆನ್ಸ್ ಮತ್ತು ಆ್ಯಂಬುಲೆನ್ಸ್ ಚಾಲಕರು ಕಾರ್ಯನಿರ್ವಹಿಸಿದ್ದಾರೆ.

ಈ ಕಾರ್ಯಕ್ಕೆ ನಯಾಪೈಸೆ ಕಾಸು ಸಹ ಪಡೆಯದೇ, ಮಗುವಿನ ಉಳಿವಿಗಾಗಿ ಸ್ವಯಂ ಪ್ರೇರಣೆಯಿಂದ ಸಹಕಾರ ಮಾಡಿದ್ದಾರೆ. ಅಷ್ಟೇ ಅಲ್ಲ, ಹಸುಗೂಸು ಸಾಗಿಸುತ್ತಿದ್ದಂತೆ ಆ್ಯಂಬುಲೆನ್ಸ್ ಗೆ ದಾರಿಯುದ್ದಕ್ಕೂ ಮತ್ತೊಂದು ಆ್ಯಂಬುಲೆನ್ಸ್ ಬೆಂಗಾವಲು ವಾಹನವಾಗಿ ಮುಂದೆ ಸಾಗಿತು.

ಆಗಿದ್ದೇನು:

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಫಕೀರಪ್ಪ ಹಾಗೂ ಹುಲಿಗೆಮ್ಮ ಅವರಿಗೆ ಜನಿಸಿದ 22 ದಿನದ ಹೆಣ್ಣು ಮಗು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಪಾಸಣೆ ಮಾಡಿದ ವೈದ್ಯರು ಮಗುವಿಗೆ ಹೃದಯ ಸಮಸ್ಯೆ ಇದ್ದು, ಉಸಿರಾಟದ ಸಮಸ್ಯೆ ಇದೆ. ತುರ್ತಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಬೇಕು. ತುರ್ತಾಗಿ ಬೆಂಗಳೂರು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದಿದ್ದರಿಂದ ಮಗುವಿನ ಪಾಲಕರು ಚಿಂತೆಗೀಡಾಗಿದ್ದರು.

ರೂಪಗೊಂಡ ಪ್ಲಾನ್:

ಫಕೀರಪ್ಪ ಸ್ಥಳೀಯರ ಸಹಾಯದಿಂದ ಖಾಸಗಿ ಆ್ಯಂಬುಲೆನ್ಸ್ ಚಾಲಕ ಅಬ್ದುಲ್ ನವೀದ್‌ ರನ್ನು ಸಂಪರ್ಕಿಸಿದರು. ಇದ್ದ ವಿಷಯವನ್ನು ಹೇಳಿ ಕೂಡಲೇ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದರು. ಆಗ ತಕ್ಷಣ ಕಾರ್ಯೋನ್ಮುಖರಾದ ಅಬ್ದುಲ್, ತಮ್ಮ ಆ್ಯಂಬುಲೆನ್ಸ್ ಚಾಲಕರ ವಾಟ್ಸ್‌ಆ್ಯಪ್ ಗ್ರೂಪ್ ನಲ್ಲಿ ಚರ್ಚಿಸಿದರು. ಈ ನಡುವೆ ಪೊಲೀಸ್ ಸಹಾಯದೊಂದಿಗೆ ಜೀರೋ ಟ್ರಾಫಿಕ್ ನಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯಿತಾದರೂ ಅದು ಕೈಗೂಡಲಿಲ್ಲ. ಲೆಟರ್ ನೀಡಬೇಕು, ಅನುಮತಿ ಬೇಕು ಎನ್ನುವ ಚರ್ಚೆಯಾಗಿದ್ದರಿಂದ ಆ್ಯಂಬುಲೆನ್ಸ್ ಚಾಲಕರ ಸಂಘದವರೆಲ್ಲರೂ ಸೇರಿ ತಾವೇ ಪರ್ಯಾಯ ಯೋಜನೆ ರೂಪಿಸಿದರು.

ಕೊಪ್ಪಳದಿಂದ ಹೊರಡುವ ಆ್ಯಂಬುಲೆನ್ಸ್ ಗೆ ಮತ್ತೊಂದು ಆ್ಯಂಬುಲೆನ್ಸ್ ಬೆಂಗಾವಲು ವಾಹನವಾಗಿ ಸಾಗುವಂತೆ ಮಾಡಲು ನಿರ್ಧರಿಸಲಾಯಿತು. ಹೊಸಪೇಟೆ ತಲುಪುತ್ತಿದ್ದಂತೆ ಅಲ್ಲೊಂದು ಬೆಂಗಾವಲು ವಾಹನ ಸಿದ್ಧ ಮಾಡಿಕೊಂಡು ಮುಂದೆ ಸಾಗುವುದು. ಹೀಗೆ, ಚಿತ್ರದುರ್ಗ, ಹಿರಿಯೂರು, ಶಿರಾ, ತುಮಕೂರು, ದಾಬಸ್‌ಪೇಟೆ, ನೆಲಮಂಗಲದಲ್ಲಿ ಒಂದೊಂದು ಆ್ಯಂಬುಲೆನ್ಸ್ ಸಿದ್ಧವಾಗಿಟ್ಟುಕೊಂಡು ಬೆಂಗಾವಲು ವಾಹನವಾಗಿ ಮುಂದೆ ಸಾಗಿದವು. 22 ದಿನಗಳ ಮಗು ಇದ್ದ ಆ್ಯಂಬುಲೆನ್ಸ್ ಸಾಗಿಸಲು ಮಾರ್ಗ ಸುಲಭವಾಯಿತು.

ಇದ್ಯಾವುದಕ್ಕೂ ಆ್ಯಂಬುಲೆನ್ಸ್ ಚಾಲಕರು ಹಣ ಪಡೆಯದೇ ಸ್ವಯ ಪ್ರೇರಣೆಯಿಂದ ಸೇವೆ ಮಾಡಿದ್ದಾರೆ. ಸುಮಾರು 9 ಆ್ಯಂಬುಲೆನ್ಸ್ ಗಳು ಮಾರ್ಗದುದ್ದಕ್ಕೂ ಕಾರ್ಯನಿರ್ವಹಿಸಿದವು.

ಕೊಪ್ಪಳದಿಂದ ಮಧ್ಯಾಹ್ನ 12.50ಕ್ಕೆ ಆ್ಯಂಬುಲೆನ್ಸ್ ಹೊರಟಿದ್ದು, 5.16ಕ್ಕೆ ಬೆಂಗಳೂರು ಜಯದೇವ ಆಸ್ಪತ್ರೆ ಸೇರಿದೆ. ಮಗು ಈಗ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಸಹ ಸಕಾಲಕ್ಕೆ ಬಂದಿದ್ದರಿಂದ ಮಗುವಿನ ಚಿಕಿತ್ಸೆಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಐಸಿಯು ಮುಂದೆ ಮಗುವಿನ ತಂದೆ, ತಾಯಿಗಳಿಬ್ಬರು ಪ್ರಾರ್ಥನೆ ಮಾಡುತ್ತಾ ಕಾಯುತ್ತಿದ್ದಾರೆ.

ಮಗು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಅದನ್ನು ಬೆಂಗಳೂರಿಗೆ ಸಾಗಿಸಬೇಕು ಎಂದಾಗ ನಾವು ಪರ್ಯಾಯ ಯೋಚನೆ ಮಾಡದೆ, ನಮ್ಮ ಚಾಲಕರ ಸಂಘದಲ್ಲಿ ಚರ್ಚೆ ಮಾಡಿ, ಎಲ್ಲರ ಸಹಕಾರದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನಂತು ತಲುಪಿಸಿದ್ದೇವೆ. ನಾವು ಸಹ ಪ್ರಾರ್ಥಿಸುತ್ತಿದ್ದೇವೆ ಎಂದು ಆ್ಯಂಬುಲೆನ್ಸ್ ಚಾಲಕ

ಅಬ್ದುಲ್ ನವೀದ್ ತಿಳಿಸಿದ್ದಾರೆ.

ವ್ಯಾಪಕ ಪ್ರಶಂಸೆ:

ಸಾಮಾನ್ಯವಾಗಿ ಹೆಣ್ಣು ಮಗುವೆಂದರೆ ತಾತ್ಸಾರ ಭಾವನೆ. ಆದರೆ, ಕೇವಲ 22 ದಿನಗಳ ಹಸುಗೂಸು ಹೃದಯ ಕಾಯಿಲೆಯಿಂದ ಬಳಲುತ್ತಿರುವಾಗ ಉಳಿಸಲು ಹರಸಾಹಸ ಮಾಡಿರುವುದು, ಆ್ಯಂಬುಲೆನ್ಸ್‌ ಚಾಲಕರ ನಿಸ್ವಾರ್ಥ ಸೇವೆ ನಿಜಕ್ಕೂ ಮಾದರಿಯಾಗಿದೆ. ಆ್ಯಂಬುಲೆನ್ಸ್ ಚಾಲಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ದೊರೆಯುತ್ತಿದೆ.