ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಒದಗಿಸಿ

| Published : Jul 04 2024, 01:04 AM IST

ಸಾರಾಂಶ

ವಸತಿ ನಿಲಯಗಳಲ್ಲಿ ಅಡುಗೆ ಕೋಣೆ, ಭೋಜನಾಲಯ, ದಾಸ್ತಾನು ಕೊಠಡಿ, ಸ್ನಾನದ ಗೃಹಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ವಚ್ಛತೆ ಹಾಗೂ ಕಲ್ಪಿಸಿರುವ ಮೂಲಭೂತ ಸೌಲಭ್ಯಗಳನ್ನು ಪ್ರತಿದಿನವೂ ನಿರ್ವಹಣೆ ಮಾಡಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಸತಿ ನಿಲಯಗಳಲ್ಲಿ ಅಡುಗೆ ಕೋಣೆ, ಭೋಜನಾಲಯ, ದಾಸ್ತಾನು ಕೊಠಡಿ, ಸ್ನಾನದ ಗೃಹಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ವಚ್ಛತೆ ಹಾಗೂ ಕಲ್ಪಿಸಿರುವ ಮೂಲಭೂತ ಸೌಲಭ್ಯಗಳನ್ನು ಪ್ರತಿದಿನವೂ ನಿರ್ವಹಣೆ ಮಾಡಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಸೂಚಿಸಿದರು.

ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಮೂರು ಬಾಲಕಿಯರ ವಸತಿ ನಿಲಯಗಳು ಹಾಗೂ ಎರಡು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯಾರ್ಥಿಗಳಿಗೆ ಸಮಯಾನುಸಾರ ಉಪಾಹಾರ, ಊಟ, ಶುದ್ಧ ಕುಡಿಯುವ ನೀರು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದರು.ವಸತಿ ನಿಲಯದ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು, ದಿನಪತ್ರಿಕೆಗಳು, ಮಾಸ ಪತ್ರಿಕೆಗಳನ್ನು ಪೂರೈಸಬೇಕು. ಗಣಕಯಂತ್ರ ಕೊಠಡಿಗಳಲ್ಲಿ ಕಡ್ಡಾಯವಾಗಿ ಇಂಟರ್ನೆಟ್ ವ್ಯವಸ್ಥೆ ಒದಗಿಸಬೇಕು. ಪ್ರತಿ ಮಾಹೆ ತಪ್ಪದೇ ವೈದ್ಯಕೀಯ ತಪಾಸಣೆ ನಡೆಸಿ, ಅವರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಪೂರೈಸಿ ಕ್ರೀಡೆಯಲ್ಲಿ ತೊಡಗುವಂತೆ ಪ್ರೇರೇಪಿಸಬೇಕು. ವಸತಿ ನಿಲಯದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಬಾಕಿ ಇದ್ದಲ್ಲಿ ತುರ್ತಾಗಿ ದುರಸ್ತಿಪಡಿಸಬೇಕು ಎಂದು ಸೂಚನೆ ನೀಡಿದರು.

ಇದೆ ವೇಳೆ ಅವರು ಅಡುಗೆ ಕೊಠಡಿ, ಭೋಜನಾಲಯ, ಸೋಲಾರ್ ವ್ಯವಸ್ಥೆ, ವಿದ್ಯಾರ್ಥಿ ತಂಗುವ ಕೊಠಡಿಗಳು, ಆಹಾರ ಪದಾರ್ಥಗಳ ಪರಿಶೀಲಿಸಿದರು.

ವಸತಿ ನಿಲಯದ ಆವರಣದಲ್ಲಿರುವ ಗ್ರಂಥಾಲಯಕ್ಕೆ ತೆರಳಿ, ವಿದ್ಯಾರ್ಥಿ ಜೀವನ ಪ್ರಮುಖವಾಗಿದ್ದು, ಓದಿನೆಡೆಗೆ ಗಮನಹರಿಸಬೇಕು. ಪಠ್ಯ ವಿಷಯ ಕರಗತ, ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಜ್ಞಾನವೂ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಕೈಗೊಳ್ಳಬೇಕು. ಓದಿನಲ್ಲಿ ಆಸಕ್ತಿ ತಾಳಿದಾಗ ಗುರಿ ಸಾಧಿಸಲು ಸಾಧ್ಯ ಎಂದು ಸಂವಾದ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಣ್ಣ ಆಶಾಪುರ, ಸಹಾಯಕ ನಿರ್ದೇಶಕ ಎಸ್.ಎಂ.ಪಾಟೀಲ ಹಾಗೂ ವಸತಿ ನಿಲಯಗಳ ನಿಲಯ ಪಾಲಕ ಟಿ.ವಿ.ಹಂಚನಾಳ, ಪಾರ್ವತಿ ಆಲಮೇಲ, ರೂಪಾ ಮೇತ್ರಿ, ಪೂಜಾ ನಿಕ್ಕಂ, ಶೀರಿನಾ ಅಗಸಿಮುಂದಿನ ಮುಂತಾದವರು ಇದ್ದರು.