ಧರ್ಮ ಜಾಗೃತಿಯಿಂದ ಮಾತ್ರ ಮನುಕುಲದ ಒಳಿತು ಸಾಧ್ಯ ಎಂದು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಧರ್ಮ ಜಾಗೃತಿಯಿಂದ ಮಾತ್ರ ಮನುಕುಲದ ಒಳಿತು ಸಾಧ್ಯ ಎಂದು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ನೆಹರೂ ಮೈದಾನದ ಶ್ರೀ ಆದಿನಾಥ ಸ್ವಾಮಿಯ ಜಿನಮಂದಿರದಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ೪ನೇ ವಾರ್ಷಿಕ ಪೂಜಾ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಧಾರ್ಮಿಕ ಭಾವನೆ ಜಾಗೃತಗೊಳ್ಳುತ್ತದೆ ಎಂದು ಹೇಳಿದರು.

ಧರ್ಮ ಮತ್ತು ವಿಜ್ಞಾನ ಬೇರೆಯಲ್ಲ. ವಿಜ್ಞಾನ ಬಂದಿರುವುದು ಧರ್ಮಶಾಸ್ತ್ರದಿಂದ. ಪಾಶ್ಚಿಮಾತ್ಯ ದೇಶಗಳು ಈ ಸಂಬಂಧ ಅನೇಕ ಸಂಶೋಧನೆಗಳನ್ನು ಮಾಡಿವೆ. ವಾಸ್ಕೋಡಿಗಾಮ ಭಾರತವನ್ನು ಹುಡುಕುವ ಮೊದಲೇ ಸಹಸ್ರಾರು ವರ್ಷಗಳಿಂದ ಭಾರತದ ಅಸ್ತಿತ್ವ ಇತ್ತು. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ನೆಲೆಯಲ್ಲಿ ಧರ್ಮಶಾಸ್ತ್ರಗಳ ಅಧ್ಯಯನ ನಡೆದಿದೆ. ವಿದೇಶಗಳಲ್ಲಿ ಕಟ್ಟಡಗಳೇ ವಿಜೃಂಭಿಸಿದರೆ ನಮ್ಮಲ್ಲಿ ಸ್ಮಾರಕಗಳ ಸಂಪತ್ತಿದೆ ಎಂದು ವಿಶ್ಲೇಶಿಸಿದರು.

ಅಧ್ಯಕ್ಷತೆ ವಹಿಸಿದ್ದ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ (ರಿ). ಅಧ್ಯಕ್ಷ ಎಸ್.ವಿ.ಹಿತಕರ ಜೈನ್ ಮಾತನಾಡಿ, ಜೈನ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ಕೊಡಲಾಗಿದೆ. ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ಜೈನ ಕುಟುಂಬಗಳು ಈಗ ೧೦೮ ಇವೆ. ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರು ಆದ್ಯತೆ ನೀಡಬೇಕು. ಮಕ್ಕಳಿಗಾಗಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಮುಂದೆ ಕಲ್ಯಾಣ ಮಂಟಪ ನಿರ್ಮಿಸುವ ಯೋಜನೆಯಿದೆ ಎಂದರು.

ರೇಷ್ಮೆ ಇಲಾಖೆ ನಿವೃತ್ತ ಮ್ಯಾನೇಜರ್ ಎಂ.ಸುಂದರಪ್ರಭು ಅವರು, ಜೈನ ಧರ್ಮ ಮತ್ತು ವಿಜ್ಞಾನ ಕುರಿತು ಉಪನ್ಯಾಸ ನೀಡಿದರು. ವೈಜೆ. ಪದ್ಮರಾಜ್ ಜೈನ್ ಮತ್ತು ವಿಜಯ ಪದ್ಮರಾಜ್ ಜೈನ್, ಹೊಯ್ಸಳ ಜೈನ್ ಮತ್ತು ರತಿ ಜೈನ್, ರಾಜಕುಮಾರ್ ಜೈನ್ ಮತ್ತು ಚಂದ್ರಕಲಾ ಜೈನ್, ಎಸ್.ಆರ್.ನಾಗರಾಜ್ ಜೈನ್ ಮತ್ತು ಶಾಂತ ಜೈನ್, ಗಜೇಂದ್ರ ಜೈನ್ ಮತ್ತು ರೇವತಿ ಜೈನ್, ಅಶೋಕಕುಮಾರ್ ಇಂದ್ರ ಮತ್ತು ಅನಿತಾ ಅಶೋಕ್ ಕುಮಾರ್ ಇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಜೈನ ಸಮಾಜದ ಅಧ್ಯಕ್ಷ ಎಂ.ಪಿ.ಲೋಕರಾಜ್ ಜೈನ್, ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಜೆ.ಪದ್ಮರಾಜ್ ಜೈನ್, ವಿವಿಧ ಬಸದಿಗಳ ಪ್ರಮುಖರು ಹಾಜರಿದ್ದರು. ಬೃಂದಾ ಜೈನ್ ಸ್ವಾಗತಿಸಿದರು. ಭವ್ಯಶ್ರೀ ನಿರೂಪಿಸಿದರು.