ಸಾರಾಂಶ
ಮಾನವೀಯತೆ ಸಾಹಿತ್ಯದ ಮೂಲ ಗುಣ. ಕವಿರಾಜ ಮಾರ್ಗದಲ್ಲಿ ಪರಧರ್ಮವನ್ನು ಸಹಿಸಿಕೊಳ್ಳಬೇಕೆಂದು ಹೇಳಿದೆ ಎಂದು ಕಥೆಗಾರ ಮೋದೂರು ತೇಜ ತಿಳಿಸಿದರು.
ಚಿತ್ರದುರ್ಗ: ಮಾನವೀಯತೆ ಸಾಹಿತ್ಯದ ಮೂಲ ಗುಣ. ಕವಿರಾಜ ಮಾರ್ಗದಲ್ಲಿ ಪರಧರ್ಮವನ್ನು ಸಹಿಸಿಕೊಳ್ಳಬೇಕೆಂದು ಹೇಳಿದೆ ಎಂದು ಕಥೆಗಾರ ಮೋದೂರು ತೇಜ ತಿಳಿಸಿದರು.
ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ಅಕ್ಷರ ಚಪ್ಪರ ಮುದ್ರಣ ಮತ್ತು ಪ್ರಕಾಶನ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ನಡೆದ ವಿಚಾರಗೋಷ್ಠಿ, ಕವಿಗೋಷ್ಠಿ, ಗಳಗನಾಥ ಅಕ್ಷರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯಕ್ಕೆ ಸೌಹಾರ್ದತೆಯನ್ನು ಸಾರುವ ಪರಂಪರೆಯಿದೆ. ಅಕ್ಷರ ಕೃಷಿ ಮಾಡುವವರಿಗೆ ಸಾಮಾಜಿಕ ಜವಾಬ್ದಾರಿಯಿರಬೇಕು. ಅಕ್ಷರ ಎಂದರೆ ಕೊರಳು ಕೊಡುವುದು, ಚಪ್ಪರವೆಂದರೆ ನೆರಳು ನೀಡುತ್ತದೆ. ಹಾಗಾಗಿ ಇಂತಹ ಒಳ್ಳೆಯ ಅರ್ಥಪೂರ್ಣವಾದ ಹೆಸರನ್ನಿಟ್ಟುಕೊಂಡಿರುವ ಸಂಸ್ಥೆಯಿಂದ ಸಮಾಜಮುಖಿ ಕೆಲಸಗಳಾಗಬೇಕೆಂದು ಹಾರೈಸಿದರು.ಡಿ.ಶಬ್ರಿನಾ ಮಹಮದ್ ಅಲಿ ಮಾತನಾಡಿ, ಅಕ್ಷರ ಎನ್ನುವುದು ಯಾವುದೇ ಒಂದು ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಭಾಷೆಗೆ ಸೇರಿದ್ದು. ಎರಡುವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಎಲ್ಲರೂ ಬಳಸುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ. ಸಾಹಿತ್ಯದಿಂದ ಸಿಗುವ ಸಂಸ್ಕಾರ ಬೇರೆ ಯಾವುದರಿಂದಲೂ ದೊರಕುವುದಿಲ್ಲ. ಸತ್ಯಹರಿಶ್ಚಂದ್ರ ನಾಟಕ ನೋಡಿ ಗಾಂಧಿಜಿ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಸಾಹಿತ್ಯ ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮನಸ್ಸಿನ ಭಾವನೆಗಳನ್ನು ಮತ್ತೊಬ್ಬರ ಜೊತೆ ವ್ಯಕ್ತಪಡಿಸಲು ಕನ್ನಡ ಸುಂದರ ಭಾಷೆ ಎಂದರು.
ಅಕ್ಷರ ಚಪ್ಪರ ಮುದ್ರಣ ಮತ್ತು ಪ್ರಕಾಶನದ ಅಧ್ಯಕ್ಷೆ ಮಧು ಅಕ್ಷರಿ ಮಾತನಾಡಿ, ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಪ್ರಕಾಶನದ ವತಿಯಿಂದ ಎರಡು ಪುಸ್ತಕಗಳನ್ನು ಹೊರತಂದಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡದ ಸೇವೆ ನಿರಂತರವಾಗಿ ಮಾಡಬೇಕೆಂಬುದು ಉದ್ದೇಶ. ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯಕ ಎಂದು ಕೋರಿದರು. ಅಕ್ಷರ ಚಪ್ಪರ ವೇದಿಕೆ ಕಾರ್ಯದರ್ಶಿ ದೀಕ್ಷಿತ್ ನಾಯಕ್, ಸುನೀಲ್ ಕುಮಾರ್, ದೀಪಿಕಾ ಬಾಬು ಇನ್ನು ಅನೇಕರು ವೇದಿಕೆಯಲ್ಲಿದ್ದರು. 25ಕ್ಕೂ ಹೆಚ್ಚು ಕವಿಗಳು ಕವನಗಳನ್ನು ವಾಚನ ಮಾಡಿದರು. ಸನ್ನಿಧಿ ಬಿ.ಕೂಚುಪುಡಿ ನೃತ್ಯ ಪ್ರದರ್ಶಿಸಿದರು.