ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರೂ ಗೌರವದಿಂದ ಬದುಕುವ ಸಮಾಜದ ನಿರ್ಮಾಣಕ್ಕೆ ಪರಿಶ್ರಮಿಸಿದ ಬಸವಣ್ಣನವರ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳಬೇಕು ಎಂದು ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಗಜ್ಯೋತಿ ಬಸವಣ್ಣ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.ಬಸವಣ್ಣನವರು 12ನೇ ಶತಮಾನದಲ್ಲಿಯೇ ಅಸ್ಪೃಶ್ಯತೆ, ಜಾತಿ ವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿದವರು, ಸಾಂಸ್ಕೃತಿಕ ನಾಯಕ ಎಂಬ ಬಿರುದನ್ನು ಹೊಂದಲು ಅವರು ಅರ್ಹ ವ್ಯಕ್ತಿಯಾಗಿದ್ದಾರೆ. ಬಸವಣ್ಣನವರ ಚಿಂತನೆಯಲ್ಲಿ ತಪ್ಪು ಕಂಡು ಹಿಡಿಯಲು ಸಾಧ್ಯವಿಲ್ಲ, ಶೋಷಿತ ಸಮಾಜದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಮ್ಮ ವಚನ ಸಾಹಿತ್ಯದ ಮೂಲಕ ಸರಳ ರೀತಿಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ. ದೇಶದಲ್ಲಿ ಕ್ರಾಂತಿಕಾರಿ ಸುಧಾರಣೆಯನ್ನು ತರುವಲ್ಲಿ ಬಸವಣ್ಣನವರಿಗೆ ಸರಿಸಾಟಿ ಯಾರೂ ಇಲ್ಲ ಎಂದು ಸಚಿವರು ಹೇಳಿದರು.ವೈಚಾರಿಕ ಚಿಂತನೆಯನ್ನು ಸಮಾಜದಲ್ಲಿ ಬೆಳೆಸುವುದು ಬಸವಣ್ಣನವರ ಮೂಲ ಆಶಯವಾಗಿತ್ತು. ಮನುಷ್ಯತ್ವವೇ ಅವರ ಮುಖ್ಯ ಧ್ಯೇಯ. ಅವರ ವಿಚಾರಧಾರೆಗಳನ್ನು ಎಲ್ಲೆಡೆ ಪಸರಿಸುವುದರಿಂದ ಸಮಾಜಕ್ಕೆ ಶಕ್ತಿ ಬರಲಿದೆ ಎಂದರು.ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ‘ವಿಶ್ವಗುರು ಬಸವಣ್ಣ, ಸಾಂಸ್ಕೃತಿಕ ನಾಯಕ’ ಭಾವಚಿತ್ರ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರವು ಅವರಿಗೆ ಉನ್ನತ ಗೌರವ ನೀಡಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಅಪರ ಜಿಲ್ಲಾಧಿಕಾರಿ ರಾಜು ಕೆ, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ವಂದಿಸಿದರು.