ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯೆಗೆ ಮೇಲು-ಕೀಳು ಎಂಬ ಯಾವುದೇ ತಾರತಮ್ಯ, ಭಿನ್ನತೆಗಳಿಲ್ಲ. ವಿದ್ಯೆಯಿಂದ ಜ್ಞಾನ ಬೆಳೆಯುತ್ತದೆ. ಜ್ಞಾನಿಗಳಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ಲಭಿಸುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಿವಮೊಗ್ಗ ತಹಸೀಲ್ದಾರ್ ಗಿರೀಶ್ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಮಾಜದಲ್ಲಿ ನಮ್ಮನ್ನು ನಾವು ಯಾವುದೇ ಸಮುದಾಯ, ಸಮಾಜ ದೊಂದಿಗೆ ಹೋಲಿಕೆ ಮಾಡಿಕೊಂಡು ಅವರು ಮೇಲು, ನಾವು ಕೀಳು ಎಂಬೆಲ್ಲ ಭಾವನೆಗಳಿಗೆ ಒಳಗಾಗಬಾರದು. ಇಲ್ಲಿ ಎಲ್ಲರೂ ಸಮಾನರು. ಆತ್ಮಸಾಕ್ಷಿಗೆ ಒಪ್ಪುವ ರೀತಿಯಲ್ಲಿ ನಾವೆಲ್ಲ ಬದುಕಬೇಕು ಎಂದರು.
ಬಣ್ಣ, ರೂಪ, ಸೌಂದರ್ಯ, ಸ್ಥಾನಮಾನಕ್ಕಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವ ಇದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನಿಗಳನ್ನು ಎಲ್ಲೆಡೆ ಪೂಜಿಸಲಾಗುತ್ತದೆ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೆಣ್ಣುಮಕ್ಕಳನ್ನು ಬಲಿಷ್ಠರಾಗಿ ಬೆಳೆಸಬೇಕು. ಶ್ರೀ ಸವಿತಾ ಮಹರ್ಷಿ ಅವರಂಥ ಮಹಾನ್ ಪುರುಷರಲ್ಲಿ ದಿವ್ಯದೃಷ್ಟಿ, ಒಂದು ಧನಾತ್ಮಕಶಕ್ತಿ ಇರುತ್ತದೆ. ಇಂತಹ ವ್ಯಕ್ತಿಗಳ ತತ್ವ, ಆದರ್ಶಗಳನ್ನು ತಿಳಿದು ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಭದ್ರಾವತಿ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ. ಜಿ.ಉಷಾದೇವಿ ಮಾತನಾಡಿ, ಸವಿತಾ ಸಮಾಜದ ಶ್ರೀ ಸವಿತಾ ಮಹರ್ಷಿಗಳು ನಾಗರೀಕತೆಯ ನಾವಿಕರು, ಮಂಗಳ ಕಾರ್ಯಗಳ ಮುಂದಾಳುಗಳು. ನಮ್ಮ ಸನಾತನ ಹಿಂದೂ ಪರಂಪರೆಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಹಲವಾರು ಋಷಿಮುನಿಗಳು ನಮ್ಮ ಸಮಾಜಕ್ಕೆ, ಪರಂಪರಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಈ ಪರಂಪರೆಯೇ ನಮಗೆ ಬುನಾದಿಯಾಗಿದೆ ಎಂದರು.
ಶ್ರೀ ಸವಿತಾ ಮಹರ್ಷಿಗಳು ಕ್ಷೌರಿಕರಾಗಿ ಸೇವೆ ಸಲ್ಲಿಸಿ, ನಂತರ ಬ್ರಹ್ಮ ವಿಷ್ಣು ಮಹೇಶ್ವರರಿಂದ ಬಹುಮಾನವಾಗಿ ರೋಗ ನಿವಾರಣೆಗೊಳಿಸುವ ಧನ್ವಂತರಿ, ಸಂಗೀತ ಸಾಧನಗಳನ್ನು ವರವಾಗಿ ಪಡೆದು ಕ್ಷೌರಿಕ, ಸಂಗೀತ, ಆಯುರ್ವೇದ ಮೂರೂ ಸೇವೆಗಳನ್ನು ದೇವಲೋಕ ಮತ್ತು ಭೂಲೋಕದಲ್ಲಿ ಮಾಡುತ್ತಾ ಬರುತ್ತಾರೆ. ಮುಂದೆ ಅವರು ಸಾಮವೇದವನ್ನು ರಚಿಸುತ್ತಾರೆ. ಇವರ ಮಗಳು ಗಾಯತ್ರಿದೇವಿ ಗಾಯತ್ರಿ ಮಂತ್ರವನ್ನು ರಚಿಸುತ್ತಾರೆ ಎಂದು ತಿಳಿಸಿದರು.ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎಂ.ಜಿ ಬಾಲು ಮಾತನಾಡಿ, ಸವಿತಾ ಸಮಾಜ ಸಂಘಟಿತವಾಗಬೇಕು. ಸಮಾಜದ ಏಳ್ಗೆಗಾಗಿ ಎಲ್ಲರೂ ಒಗ್ಗೂಡಬೇಕು. ಸವಿತಾ ಸಮಾಜದವರೇ ಆದ ಬಿಹಾರದ ಮಾಜಿ ಮುಖ್ಯಮಂತ್ರಿ ದಿ.ಕರ್ಪೂರಿ ಠಾಕೂರ್ ಅವರ ಸೇವೆಗಾಗಿ ಭಾರತ ಸರ್ಕಾರ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ, ಗೌರವಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಈ ಸಂದರ್ಭ ಅವರನ್ನು ಅಭಿನಂದಿಸೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಶಿವಮೊಗ್ಗ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಬಿ.ಎನ್. ಧರ್ಮರಾಜ್ ವಂದಿಸಿದರು. ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.