ಸಾರಾಂಶ
ಶಿಕ್ಷಣದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯವಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕು ಎಂದು ಸಮಾಜ ಸೇವಕ ಎಲ್. ಸುರೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಶಿಕ್ಷಣದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯವಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕು ಎಂದು ಸಮಾಜ ಸೇವಕ ಎಲ್. ಸುರೇಶ್ ತಿಳಿಸಿದರು.
ನಗರದ ಸಂತ ಜೋಸೆಫ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನೆಯೇ ಮೊದಲ ಪಾಠಶಾಲೆ ಎಂಬಂತೆ, ಮನೆಯಿಂದಲೇ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಹಾಗೂ ಶಿಸ್ತು ಕಲಿಸಬೇಕು. ಪೋಷಕರು ಸಹ ಶಾಲೆಗೆ ಸೇರಿಸುವ ಜೊತೆಗೆ ತಾವು ಸಹ ತಮ್ಮ ಮಕ್ಕಳ ಕಲಿಕೆ ಬಗ್ಗೆ ಆಸಕ್ತಿ ವಹಿಸಿ, ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.ಎಲ್ಲಾ ರಂಗದಲ್ಲೂ ಮಕ್ಕಳು ಪ್ರಬುದ್ಧತೆಯನ್ನು ಮೆರೆದಾಗ ಮಾತ್ರ ಪರಿಪೂರ್ಣ ಶಿಕ್ಷಣ ಅವರಿಗೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸಂತ ಜೋಸೆಫ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಮಕ್ಕಳ ಭೌತಿಕ ವಿಕಸನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಶಾಲವಾದ ಆಟದ ಮೈದಾನ, ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶಾಲದ ವೇದಿಕೆ, ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಬೋದನಾ ವರ್ಗವಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಶಾಂತಿ ರೋಸ್ ಮಾತನಾಡಿ, ನರ್ಸರಿಯಿಂದ 7ನೇ ತರಗತಿಯವರಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಶ್ರಮಿಸಲಾಗುತ್ತಿದೆ. ಮಕ್ಕಳ ಜೊತೆಗೆ ಪೋಷಕರು ಭಾಗವಹಿಸುವ ಮೂಲಕ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಮೂಡಿದೆ. ಮುಂದಿಯು ಸಹ ಇದೇ ರೀತಿ ಸಹಕಾರ ಸಂಸ್ಥೆಯ ಮೇಲೆ ಇರಲಿ ಎಂದರು.ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೇಕ್ಷಕರು ಹಾಗೂ ಪೋಷಕರಿಗೆ ಮನೋರಂಜನೆಯನ್ನು ನೀಡಿದವು. ಗೌರಿ ರಾಮಕೃಷ್ಣ, ಪೊಲೀಸ್ ಇಲಾಖೆ ಗುರುಪ್ರಸಾದ್, ಸಮಾಜಸೇವಕ ಎಲ್.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಸಹಶಿಕ್ಷಕ ವೃಂದವರು ಇದ್ದರು.