ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ ಭಾರತದ ಉತ್ತರದಲ್ಲಿರುವ ಹರಿಯಾಣದ ಗಡ್ಪುರಿಯಲ್ಲಿ ಫೆ.೧೯ರಿಂದ ೨೩ರ ವರೆಗೆ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಬಂಟ್ವಾಳ ತಾಲೂಕಿನ ಮಾಣಿ- ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ೮ ಸ್ಕೌಟ್ಸ್ ಮತ್ತು 10 ಗೈಡ್ಸ್ ಹಾಗೂ ಇಬ್ಬರು ಶಿಕ್ಷಕರಾದ ಸುಪ್ರಿಯಾ ಡಿ., ಸ್ವಪ್ನಾ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಶಿಬಿರಾರ್ಥಿಗಳನ್ನು ಬೀಳ್ಕೊಡುವ ಕಾರ್ಯಕ್ರಮ ‘ಭಾವಯಾನ - ಬದುಕಿನ ಕಲೆಯ ಪಯಣ’ ಎಂಬ ಅರ್ಥಪೂರ್ಣ ಹೆಸರಿನೊಂದಿಗೆ ಇತ್ತಿಚೆಗೆ ನಡೆಯಿತು. ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ. ದೀಪ ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ತಮ್ಮ ಭಾವನೆಗಳನ್ನಲ್ಲದೆ ಶಾಲೆಯ ಪ್ರತಿಯೊಂದು ಮಗುವಿನ ಭಾವನೆಯನ್ನು ತಮ್ಮೊಂದಿಗೆ ರಾಜ್ಯಮಟ್ಟಕ್ಕೆ ಹೊತ್ತೊಯ್ಯುತ್ತಿದ್ದಾರೆ ಎಂದರು. ಮುಖ್ಯ ಅತಿಥಿ ಭರತ್ ರಾಜ್ ಕೆ. ಮಾತನಾಡಿ, ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಸ್ಕೌಟ್ಸ್- ಗೈಡ್ಸ್ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಸಂಸ್ಥೆ ಬಾಲವಿಕಾಸ ಎಂಬುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಯು. ಶರಣಪ್ಪ, ಬಾಲಕೃಷ್ಣ ಆಳ್ವ, ಸಂಸ್ಥೆಯ ಕಾರ್ಯದರ್ಶಿಗಳಾದ ಮಹೇಶ್ ಶೆಟ್ಟಿ ಜೆ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ ಇದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ರವೀಂದ್ರ ಡಿ. ಸ್ವಾಗತಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ವಿ. ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸೌಮ್ಯ ಹಾಗೂ ಅಶ್ವಿನಿ ಪಿ.ಆರ್. ನಿರೂಪಿಸಿದರು. ಹರಿಯಾಣದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬಾಲವಿಕಾಸದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹಾಡು ನೃತ್ಯದ ಮೂಲಕ ಬೀಳ್ಕೊಡಲಾಯಿತು.