ಸಾರಾಂಶ
ದಾವಣಗೆರೆ : ಪ್ರಕೃತಿ ಪ್ರಿಯರ ಸ್ವರ್ಗವಾದ ಜಮ್ಮು-ಕಾಶ್ಮೀರದ ಪೆಹಲ್ಗಾಂನಲ್ಲಿ ಪ್ರವಾಸಿಗರನ್ನು ನಿನ್ನ ಹೆಸರೇನು, ಧರ್ಮ ಯಾವುದೆಂದು ಕೇಳಿ, ಹತ್ಯೆಗೈದ ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಮತಾಂಧರಿಂದಲೇ ಮಾನವ ಕುಲ ನಾಶವಾದೀತು ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ನಗರದ ವಿರಕ್ತಮಠದಲ್ಲಿ ಗುರುವಾರ ಬೆಳಿಗ್ಗೆ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ (ವೀರಶೈವ) ತರುಣ ಸಂಘದಿಂದ 113ನೇ ವರ್ಷದ ಬಸವ ಜಯಂತ್ಯುತ್ಸವದ ಅಂಗವಾಗಿ 109ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆ ಸಾನಿಧ್ಯ ವಹಿಸಿ ಮಾತನಾಡಿದರು.
ಕೊಲೆ ಮಾಡುವುದೇ ಮೊದಲ ತಪ್ಪು, ಅದರಲ್ಲೂ ಧರ್ಮದ ವಿಚಾರವಾಗಿ ಕೊಲೆ ಮಾಡುವುದು ದೊಡ್ಡ ತಪ್ಪು, ಪಹಲ್ಗಾಂನ ಘಟನೆ ಅಮಾನುಷವಾಗಿದೆ. ನಾವೆಲ್ಲರೂ ಯಾವುದೇ ಜಾತಿ, ಧರ್ಮದವರಾಗಿದ್ದರೂ ಮೊದಲು ನಾವು ಮಾನವರು. ಮಾನವ ಕುಲ ಉಳಿಯಬೇಕಾದರೆ ಬಸವಣ್ಣನವರು ನೀಡಿದ ದಯವಿಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂಬ ಸಂದೇಶ ಪಾಲಿಸಬೇಕು ಎಂದರು.
ಬಸವ ತತ್ವಗಳ ಪಾಲನೆಯಿಂದ ಸಮ ಸಮಾಜ ನಿರ್ಮಾಣ ಸಾಧ್ಯ. ಕಾಯಕ, ದಾಸೋಹ, ಬಸವ ತತ್ವ ಪಾಲನೆಯಿಂದ ದೇಶದ ಉದ್ಧಾರ ಸಾಧ್ಯ. ಬಸವ ಜಯಂತಿ ಆಚರಣೆ 1913ರಲ್ಲಿ ಮೊಟ್ಟಮೊದಲು ಇದೇ ದಾವಣಗೆರೆಯ ವಿರಕ್ತಮಠದಿಂದ. ಬಸವ ಪ್ರಭಾತ್ ಪೇರಿ ಆರಂಭವಾಗಲು ಕಾರಣ ಹರ್ಡೆಕರ್ ಮಂಜಪ್ಪ, ಜಯದೇವ ಜಗದ್ಗುರು, ಮೃತ್ಯುಂಜಯ ಸ್ವಾಮೀಜಿ ಎಂದು ಸ್ಮರಿಸಿದರು.
1917ರಲ್ಲಿ ಕರ್ನಾಟಕ ಗಾಂಧಿ ಅಂತಲೇ ಪ್ರಸಿದ್ಧರಾದ ಹರ್ಡೇಕರ್ ಮಂಜಪ್ಪ ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿ ಆರಂಭಿಸಿದರು. ಇಡೀ ವಿಶ್ವವೇ ಇಂದು ಬಸವ ಜಯಂತಿ ಆಚರಣೆ ಮಾಡುತ್ತದೆ. ಅಂತಹ ಮಹಾನ್ ಮಾನವತಾವಾದಿ ಬಸವಣ್ಣನ ಮೊದಲ ಜಯಂತಿ ಆಚರಿಸಿದ ಊರು ನಮ್ಮದು ಎಂದರು.
ದೂಡಾ ಸದಸ್ಯೆ ವಾಣಿ ಬಕ್ಕೇಶ್ ನ್ಯಾಮತಿ ಪ್ರಭಾತ್ ಪೇರಿ ಉದ್ಘಾಟಿಸಿ, ಬಸವ ತತ್ವಗಳು ಎಲ್ಲಾ ವರ್ಗದ ಜನತೆಗೆ ಅವಶ್ಯಕವಾಗಿದೆ. ಬಸವಣ್ಣನ ತತ್ವಾದರ್ಶ, ಪ್ರತಿ ವಚನಗಳು ಇಂದಿಗೂ ಆದರ್ಶವಾಗಿವೆ ಎಂದರು.
ಬಸವ ಕಲಾಲೋಕದ ತಂಡದವರು ವಚನ ಭಜನೆ ನಡೆಸಿಕೊಟ್ಟರು. ಮೊದಲ ದಿನದ ಪ್ರಭಾತ್ ಪೇರಿಯು ವಿರಕ್ತಮಠದಿಂದ ಹೊರಟು, ದೊಡ್ಡಪೇಟೆ, ವೀರಮದಕರಿನಾಯಕ ವೃತ್ತ, ಜಾಲಿನಗರ, ಕೊಂಡಜ್ಜಿ ರಸ್ತೆ, ವಿನಾಯಕ ನಗರದ ಮೂಲಕ ಹೊರಟು ಯಲ್ಲಮ್ಮನಗರದಲ್ಲಿ ಮುಕ್ತಾಯವಾಯಿತು.
ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ, ಬಿಜೆಪಿ ಹಿರಿಯ ಮುಖಂಡರಾದ ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ಶಿವನಗೌಡ ಪಾಟೀಲ್, ಕಾಂಗ್ರೆಸ್ ಹಿರಿಯ ಮುಖಂಡ, ಅಭಿ ಕಾಟನ್ಸ್ ಮಾಲೀಕ ಎನ್.ಬಕ್ಕೇಶ ನ್ಯಾಮತಿ, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ಕೆ.ಸಿ.ಉಮೇಶ, ಚನ್ನಬಸವ ಶೀಲವಂತ, ಶಶಿಧರ ಬಸಾಪುರ, ಆವರಗೆರೆ ರುದ್ರಮುನಿ, ಚೇತನ ಶಿವಕುಮಾರ, ಪವಿತ್ರಾ, ವೀಣಾ ಮಂಜುನಾಥ, ಮಹಾದೇವಮ್ಮ, ಸುಜಾತ, ಮಹಾಲಿಂಗೇಶ್ವರ, ಯೋಗ ಒಕ್ಕೂಟದ ಜಿ.ಮಹಾಂತೇಶ, ಪ್ರಕಾಶ ಉತ್ತಂಗಿ, ಸಂಗಪ್ಪ, ಕೆ.ಕರಿಬಸಪ್ಪ, ರೋಷನ್, ಬಿರಾದಾರ್, ಶರಣಬಸವ, ಕೀರ್ತಿ, ಕುಮಾರಸ್ವಾಮಿ, ಕೊಟ್ರೇಶ್, ಕುಂಟೋಜಿ ಚನ್ನಪ್ಪ, ಪ್ರೊ.ಮಲ್ಲಿಕಾರ್ಜುನ ಜವಳಿ, ಶ್ರೀಮಠದ ಭಕ್ತರು, ವಿರಕ್ತಮಠ, ಬಕ್ಕೇಶ್ವರ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.