ಕಬ್ಬು ಬೆಳೆಗಾರರ ಅವಹೇಳನ, ಕ್ರಮಕ್ಕೆ ಆಗ್ರಹ

| Published : Jan 28 2025, 12:46 AM IST

ಸಾರಾಂಶ

ಕಬ್ಬು ಬೆಳೆಗಾರರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ ಮುಂಡರಗಿ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ನೇತೃತ್ವದಲ್ಲಿ ರೈತರು ಮುಂಡರಗಿ ಸಿಪಿಐಗೆ ಮನವಿ ಸಲ್ಲಿಸಿದರು.

ಮುಂಡರಗಿ: ಕಬ್ಬು ಬೆಳೆಗಾರರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ ಮುಂಡರಗಿ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ನೇತೃತ್ವದಲ್ಲಿ ರೈತರು ಮುಂಡರಗಿ ಸಿಪಿಐಗೆ ಮನವಿ ಸಲ್ಲಿಸಿದರು.

ಆನಂತರ ಮಾತನಾಡಿದ ವೀರನಗೌಡ ಪಾಟೀಲ, ಮುಂಡರಗಿ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಸಾಮಾಜಿಕ ಜಾಲತಾಣದಲ್ಲಿ ಕಬ್ಬು ಬೆಳೆಗಾರರ ಬಗ್ಗೆ, ಕಬ್ಬು ಬೆಳೆಗಾರ ರೈತರ ಬಗ್ಗೆ ಆರೋಪಿಸಿ ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಎಲ್ಲ ಕಬ್ಬು ಬೆಳೆಗಾರರನ್ನು ಜನರು ತಪ್ಪು ಭಾವನೆಯಿಂದ ನೋಡುವಂತಾಗಿದೆ. ಅದಕ್ಕಾಗಿ ಕೂಡಲೇ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಬೇಕು ಹಾಗೂ ಕಬ್ಬು ಬೆಳಗಾರರ ಸಂಘಕ್ಕೆ ಹಾಗೂ ಬೆಳೆಗಾರರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹಾವಿನಾಳ ಅವರು ಕಬ್ಬು ಬೆಳೆಗಾರರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಹಾವಿನಾಳ ಅವರನ್ನು ಒಂದು ವಾರದೊಳಗಾಗಿ ವಿಚಾರಣೆಗೆ ಒಳಪಡಿಸಬೇಕು ಎಂದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿಕುಮಾರ ಕೊಳಲ, ಪ್ರಕಾಶ ಸಜ್ಜನರ, ವಿಜಯನಗರ ಜಿಲ್ಲಾಧ್ಯಕ್ಷ ರವಿ ನಾಯ್ಕ, ಹೂವಿನ ಹಡಗಲಿ, ಬೆನ್ನೂರು ಹಾಲಪ್ಪ, ಕೊಪ್ಪಳ ಜಿಲ್ಲಾಧ್ಯಕ್ಷ ಸಂತೋಷ ಹಳ್ಳಿ, ಈರಣ್ಣ ಮಲ್ಲಾಡದ, ಮರಿಯಪ್ಪ ಹಂಪಸಾಗರ, ವೀರಣ್ಣ ಕವಲೂರು, ಹುಸೇನಸಾಬ್ ಕುರಿ, ರಂಗಪ್ಪ ಹಮ್ಮಿಗಿ, ರೇವಣಸಿದ್ದಪ್ಪ ಹುಬ್ಬಳ್ಳಿ, ಹನಮಪ್ಪ ಗಾಂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಜಾಲತಾಣದ ಪೋಸ್ಟ್‌ನಲ್ಲೇನಿದೆ?: ಮುಂಡರಗಿ ತಾಲೂಕಿನ ತುಂಗಭದ್ರೆಯ ನದಿ ತೀರದ ಮರಳು ಗುತ್ತಿಗೆದಾರರ ಮೇಲೆ ನಿರಂತರವಾಗಿ 5 ವರ್ಷಗಳ ವರೆಗೆ ಸುಳ್ಳು ಆರೋಪ ಮಾಡಿ ಅವರಿಂದ ದುಡ್ಡು ಕೀಳಲು ಪ್ರಯತ್ನಿಸಿ ವಿಫಲರಾದ ಕಬ್ಬು ಬೆಳೆಗಾರರ ರೈತ ನಾಯಕರು (ಮುಂಡರಗಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇರುವವರು ಮಾತ್ರ) ಈಗ ಅದೇ ತುಂಗಭದ್ರಾ ನದಿಯ ನೀರು ಸಂಪೂರ್ಣ ಹಸಿರಾದಾಗ ನಾಪತ್ತೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಿ, ಈಗ ಏಕೆ ಮುಂಚೂಣಿಗೆ ಬಂದು ಹೋರಾಟ ಮಾಡುತ್ತಿಲ್ಲ? ತನಿಖೆ ಮಾಡಿರೆಂದು ಹೇಳುತ್ತಿಲ್ಲ? ತನಿಖೆ ಮಾಡಿರೆಂದು ಪ್ರಶ್ನೆ ಮಾಡುತ್ತಿಲ್ಲ ಎಂದು ಹಾವಿನಾಳ ಪ್ರಶ್ನಿಸಿದ್ದಾರೆ.