ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ಪೂರೈಸಲಾಗುತ್ತಿದೆಯೇ ? ಹಿಂದಿನ ರಾತ್ರಿಯ ಅನ್ನವನ್ನು ಬಿಸಿ ಮಾಡಿ, ಹಳಸಿದ ಸಾಂಬಾರು ಜತೆಗೆ ಬಡವರಿಗೆ ನೀಡಲಾಗುತ್ತಿದೆಯೇ ?
ಬಸವರಾಜ ಎಂ. ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ಪೂರೈಸಲಾಗುತ್ತಿದೆಯೇ ? ಹಿಂದಿನ ರಾತ್ರಿಯ ಅನ್ನವನ್ನು ಬಿಸಿ ಮಾಡಿ, ಹಳಸಿದ ಸಾಂಬಾರು ಜತೆಗೆ ಬಡವರಿಗೆ ನೀಡಲಾಗುತ್ತಿದೆಯೇ ?
ಇಂತಹ ಆರೋಪಗಳು ಇದೀಗ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿವೆ. ಗುರುವಾರ ಮಧ್ಯಾಹ್ನ ಆಹಾರ ಸೇವಿಸಿದ ನಾಗರಿಕರು ಕ್ಯಾಂಟೀನ್ ಅಡುಗೆ ಭಟ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಧ್ಯಾಹ್ನದ ಊಟಕ್ಕೆ ಸಾರ್ವಜನಿಕರಿಗೆ ಹಿಂದಿನ ರಾತ್ರಿಯ ಅನ್ನವನ್ನು ಬಿಸಿ ಮಾಡಿ, ಹಳಸಿದ ಸಾಂಬಾರ ಜತೆಗೆ ನೀಡಲಾಗಿದೆ ಎಂದು ಹಸಿದು ಬಂದ ಜನ ಕೋಪಗೊಳ್ಳುತ್ತಿದ್ದಂತೆಯೇ, ತಪ್ಪಾಗಿದೆ ಬೇರೆ ಅಡುಗೆ ಮಾಡಿ ಕೊಡುತ್ತೇವೆ ಎಂದು ಹಳಸಿದ ಸಾಂಬಾರ ತೆಗದು ಸಾರ್ವಜನಿಕರಿಗೆ ಕ್ಯಾಂಟೀನ್ ಮುಖ್ಯಸ್ಥರು ಸಮಾಧಾನಪಡಿಸಿದರು.ನಂತರ ಅಡುಗೆ ಭಟ್ಟರನ್ನು ಯಾಕೆ ಹೀಗೆ ಮಾಡುತ್ತಿದ್ದೀರಿ ? ಬಡಜನರ ಜೀವನದ ಜತೆಗೆ ಆಟವಾಡುತ್ತಿದ್ದೀರಲ್ಲಾ ? ಎಂದು ಜನರು ಪ್ರಶ್ನಿಸಿದ್ದಕ್ಕೆ, ಬೆಳಗ್ಗೆ ಬಿಸಿಯಾದ ಅಡುಗೆ ಮಾಡಲು ಸಾಧ್ಯವಾಗಿರಲಿಲ್ಲ ಅದಕ್ಕೆ ರಾತ್ರಿಯ ಅನ್ನ ಸಾಂಬಾರ್ ನೀಡಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್‌ಗೆ ಬಹುತೇಕ ಬಡ ಜನರೇ ಆಗಮಿಸುತ್ತಾರೆ. ಹತ್ತಿರದಲ್ಲಿಯೇ ಪಿಯುಸಿ, ಡಿಗ್ರಿ ಕಾಲೇಜು, ತಹಸೀಲ್ದಾರ್ ಕಚೇರಿ, ಪೋಲಿಸ್ ಠಾಣೆ, ತಾಲೂಕು ಪಂಚಾಯ್ತಿಗೆ ಬರುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇಲ್ಲಿಯೇ ಊಟ ಮಾಡುತ್ತಾರೆ.ಈ ಕುರಿತಂತೆ ಮಾತನಾಡಿದ ಗ್ರಾಹಕ ತಾಯಪ್ಪ, ನಾನು ಕಂದಾಯ ಇಲಾಖೆಯ ಕೆಲಸದ ನಿಮಿತ್ತ ಹುಣಸಗಿ ಪಟ್ಟಣಕ್ಕೆ ಬಂದಿದೆ. ನನ್ನ ಹತ್ತಿರ ಹೆಚ್ಚು ದುಡ್ಡು ಇರಲಿಲ್ಲಾ. ಈ ಕಾರಣದಿಂದ ಇಂದಿರಾ ಕ್ಯಾಂಟೀನ್‌ಗೆ ಊಟಕ್ಕೆ ಬಂದಿದ್ದೆ. ಸರ್ಕಾರ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ಮಾಡಿದೆ. 10 ರು., 20 ರು. ಕೊಟ್ಟರೆ ಊಟ ಸಿಗುತ್ತೆ ಅಂತಾ ಇಲ್ಲಿಗೆ ಬಂದಿದ್ದೆ. ಆದರೆ ಇಲ್ಲಿ ಬಂದು ನೋಡಿದರೆ ಸಾಂಬಾರ್ ಹಳಸಿ ಹೋಗಿದೆ. ಹಳಸಿದ ಸಾಂಬಾರ್ - ಅನ್ನ ಹೇಗೆ ತಿನ್ನಬೇಕು? ಆಹಾರ ಸೇವಿಸಿದ ನಂತರ ನನಗೆ ಅನುಮಾನ ಬಂದಿತ್ತು. ಆ ನಂತರ ವಾಸನೆ ನೋಡಿದಾಗ ಸಾಂಬಾರ್ ಹಳಸಿ ಹೋಗಿತ್ತು. ಹಳಸಿದ ಅನ್ನ ಸಾಂಬಾರ್ ಊಟ ಮಾಡಿದರೆ ನನ್ನ ಆರೋಗ್ಯದಲ್ಲಿ ಏರುಪೇರು ಆದರೆ ಇದಕ್ಕೆ ಯಾರು ಹೊಣೆ ? " ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿದಿನ 50 ರಿಂದ ಜನರಿಗೆ ಆಗುವಷ್ಟು ಉಪಾಹಾರ ಮಾತ್ರ ತಯಾರಿಸುತ್ತಾರೆ. ಆನಂತರ ಬಂದವರಿಗೆ ಸಿಗುವುದಿಲ್ಲ. ಅಲ್ಲದೆ ಅಲ್ಲಿ ತಯಾರಿಸುವ ಆಹಾರ ಕಳಪೆಯಾಗಿದೆ. ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದೆ.ಗ್ರಾಹಕರಿಂದ ಕೇವಲ 10- 20 ರು.ಪಡೆದು ತಿಂಡಿ ಮತ್ತು ಊಟ ನೀಡುವ ಗುತ್ತಿಗೆದಾರರು ಸರ್ಕಾರದಿಂದ ಹೆಚ್ಚಿನ ವೆಚ್ಚವನ್ನು ಅನುದಾನ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ಆದ್ದರಿಂದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಗುಣಮಟ್ಟದ ಅಡುಗೆ ತಯಾರಿಸಿ, ಬಡಜನರಿಗೆ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾಧ್ಯಕ್ಷ ಕಾಶಿನಾಥ ಹಾದಿಮನಿ ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ನೀಡಲು ಇಂದಿರಾ ಕ್ಯಾಂಟಿನ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಹಳಸಿದ ಸಾಂಬರ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಬೇಟಿ ನೀಡಿ ಕ್ರಮ ತೆಗೆದುಕೊಳ್ಳಲಾಗುವದು ಹುಣಸಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಅರುಣ ಕುಮಾರ ಹೇಳಿದರು.