ದಾವಣಗೆರೆ : ಜಿಲ್ಲೆಯಲ್ಲಿ ಮಳೆಗೆ ನೂರಾರು ಎಕರೆ ಭತ್ತ ನಾಶ

| Published : May 20 2024, 01:41 AM IST / Updated: May 20 2024, 12:45 PM IST

odisha crop

ಸಾರಾಂಶ

ದಾವಣಗೆರೆ ನಗರ, ಜಿಲ್ಲೆಯ ವಿವಿಧೆಡೆ ಸತತ ನಾಲ್ಕನೇ ದಿನವೂ ವರುಣನ ಕೃಪೆ ಮುಂದುವರಿದಿದ್ದು, ಭಾನುವಾರವೂ ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ, ಸಂಜೆ ಮಳೆಯಾಗುವ ಮೂಲಕ ಜನರು ವಿಶೇಷವಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

 ದಾವಣಗೆರೆ : ದಾವಣಗೆರೆ ನಗರ, ಜಿಲ್ಲೆಯ ವಿವಿಧೆಡೆ ಸತತ ನಾಲ್ಕನೇ ದಿನವೂ ವರುಣನ ಕೃಪೆ ಮುಂದುವರಿದಿದ್ದು, ಭಾನುವಾರವೂ ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ, ಸಂಜೆ ಮಳೆಯಾಗುವ ಮೂಲಕ ಜನರು ವಿಶೇಷವಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಜನರಿಗೆ ಉಷ್ಣಗಾಳಿಯಿಂದ ಮುಕ್ತಿ ಸಿಕ್ಕಂತಾಗಿದ್ದು, ಒಂದಿಷ್ಟು ತಂಗಾಳಿಯ ಅನುಭವವಾಗುತ್ತಿದೆ. ಫ್ಯಾನ್‌ಗಳಲ್ಲೂ ಸಹ ಗಾಳಿ ಬರುತ್ತಿಲ್ಲವೆಂಬಷ್ಟರ ಮಟ್ಟಿಗೆ ಇದ್ದ ವಿಪರೀತ ಸೆಕೆಯೂ ಒಂದಿಷ್ಟು ಕಡಿಮೆಯಾಗಿರುವುದು ಜನರಿಗೆ ಖುಷಿ ತಂದಿದೆ.

ತಾಲೂಕಿನ ದೊಡ್ಡಬಾತಿ ಗ್ರಾಮದ ಬಳಿ ಶನಿವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ನೂರಾರು ಎಕರೆ ಭತ್ತದ ಬೆಳೆಗೆ ಹಾನಿಯಾಗಿದೆ. ಭದ್ರಾ ನಾಲೆಯಿಂದ ಬೇಸಿಗೆ ಬೆಳೆಗೆ ಬಿಟ್ಟಿದ್ದ ನೀರಿನಿಂದ ಬೆಳೆಗಿದ್ದ ಕಟಾವಿಗೆ ಬಂದಿದ್ದ ಬತ್ತವು ಮಣ್ಣು ಪಾಲಾಗಿದೆ. ನಿನ್ನೆ ಸಂಜೆ ಸುರಿದ ಭಾರಿ ಗಾಳಿ, ದೊಡ್ಡ ಹನಿಗಳ ಮಳೆಯ ಹೊಡೆತಕ್ಕೆ ಭತ್ತವು ನೆಲ ಕಚ್ಚಿದೆ ಎಂಬುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ.

ಒಂದು ಸಲ ತೀವ್ರ ಬರದಿಂದ ಕಂಗಾಲಾಗಿದ್ದ ರೈತರು ಈಗ ಜೋರು ಮಳೆಗೆ ತಾವು ಬೆಳೆದ ಭತ್ತ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಎಂಬ ನಿರಾಸೆಯಲ್ಲಿದ್ದಾರೆ. ಕಳೆದ ಬಾರಿಯೂ ಮಳೆ ಇಲ್ಲದೇ, ಬೆಳೆ ಕಳೆದುಕೊಂಡಿದ್ದ ರೈತರಿಗೆ ಇನ್ನೂ ಸರ್ಕಾರದ ಬೆಳೆ ಹಾನಿ ಪರಿಹಾರ ಬಂದಿಲ್ಲ. ಅಷ್ಟರಲ್ಲಿ ಮತ್ತೆ ಭತ್ತದ ಬೆಳೆ ಹಾನಿ ಆಗಿರುವುದು ರೈತರ ಆತಂಕಕ್ಕೆ ಕಾರಣ‍ವಾಗಿದೆ. ಬರದ ಮಧ್ಯೆಯೂ ಬತ್ತ ಬೆಳೆದಿದ್ದೆವು. ಮಳೆ ಬಂದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂಬುದಾಗಿ ರೈತರು ಬೇಸರ ವ್ಯಕ್ತಪಡಿಸಿದರು.