ಜಿಲ್ಲೆಯ ಅಭಿವೃದ್ಧಿಗೆ ₹100 ಕೋಟಿ ಅನುದಾನ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

| Published : Jan 27 2024, 01:20 AM IST

ಜಿಲ್ಲೆಯ ಅಭಿವೃದ್ಧಿಗೆ ₹100 ಕೋಟಿ ಅನುದಾನ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ನಿಂತು ಹೋಗಿದ್ದ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಶುರುವಾಗಿವೆ. ಅಭಿವೃದ್ಧಿ ಪರ್ವವೇ ಪುನಾರಂಭವಾಗಿದೆ. ಕಳೆದೈದು ವರ್ಷಗಳಿಂದ ಜಡ್ಡುಗಟ್ಟಿದ ವಾತಾವರಣವಿತ್ತು. ಈಗ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಉದ್ಘಾಟನೆ ನೆರವೇರಿಸುತ್ತಿದ್ದೇವೆ. ಇದು ಆರಂಭವಷ್ಟೇ. ರಾಜ್ಯ ಸರ್ಕಾರದಿಂದ 100 ಕೋಟಿ ರು. ಅನುದಾನ ಬಂದಿದ್ದು, ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ವೇಗ ಪಡೆಯಲಿವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಮತ್ತೆ ಶುರುವಾಗಿದ್ದು, ಎಲ್ಲರೂ ನಮ್ಮ ಊರಿನತ್ತ ತಿರುಗಿ ನೋಡುವಂತೆ ಅಭಿವೃದ್ಧಿಪಡಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.

ನಗರದ ಎಂಸಿಸಿ ಬಿ ಬ್ಲಾಕ್‌ನ ಬಾಪೂಜಿ ಪ್ರೌಢಶಾಲೆ ಮುಂಭಾಗದಲ್ಲಿ ಶುಕ್ರವಾರ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಹೈಟೆಕ್ ಬಸ್‌ ನಿಲ್ದಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ನಿಂತು ಹೋಗಿದ್ದ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಶುರುವಾಗಿವೆ. ಅಭಿವೃದ್ಧಿ ಪರ್ವವೇ ಪುನಾರಂಭವಾಗಿದೆ. ಕಳೆದೈದು ವರ್ಷಗಳಿಂದ ಜಡ್ಡುಗಟ್ಟಿದ ವಾತಾವರಣವಿತ್ತು. ಈಗ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಉದ್ಘಾಟನೆ ನೆರವೇರಿಸುತ್ತಿದ್ದೇವೆ. ಇದು ಆರಂಭವಷ್ಟೇ. ರಾಜ್ಯ ಸರ್ಕಾರದಿಂದ 100 ಕೋಟಿ ರು. ಅನುದಾನ ಬಂದಿದ್ದು, ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ವೇಗ ಪಡೆಯಲಿವೆ ಎಂದು ತಿಳಿಸಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಗರ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿದ್ದವು. ಕಾಮಗಾರಿಗಳು ಸಮರ್ಪಕವಾಗಿ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಸುಂದರ, ಸ್ವಚ್ಛ ನಗರವಾಗಿಸಲು ಒತ್ತು ನೀಡುತ್ತೇವೆ. ಅಭಿವೃದ್ಧಿ ಕಾರ್ಯಗಳೇನೆಂಬುದು ದಾವಣಗೆರೆಯತ್ತ ತಿರುಗಿ ನೋಡುವಂತೆ ಮಾಡುತ್ತೇವೆ. ಗಣರಾಜ್ಯೋತ್ಸವ ದಿನದಂದೇ ಸಾಕಷ್ಟು ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಸಾಕಷ್ಟು ಕಾಮಗಾರಿಗಳಿಗೆ ಉದ್ಘಾಟನೆಯೂ ನೆರವೇರಿಸುತ್ತಿದ್ದೇವೆ ಎಂದರು.

ಪಾಲಿಕೆ ಸದಸ್ಯ ಜಿ.ಎಸ್‌.ಮಂಜುನಾಥ ಗಡಿಗುಡಾಳ್ ಮಾತನಾಡಿ, ಸಚಿವರಾಗಿ ಎಸ್ಸೆಸ್ ಮಲ್ಲಿಕಾರ್ಜುನ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅಭಿವೃದ್ಧಿ ಪರ್ವ ಮತ್ತೆ ಶುರುವಾಗಿದೆ. ಈಗ ಗುದ್ದಲಿ ಪೂಜೆ, ವಿವಿಧ ಕಾಮಗಾರಿ ಉದ್ಘಾಟನೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಹಿಂದೆ ಎಸ್ಸೆಸ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿ, ಮೂಲ ಸೌಕರ್ಯ ಕಲ್ಪಿಸುವುದು, ಮಾದರಿ ಅಭಿವೃದ್ಧಿ ಕಾರ್ಯ ಹೀಗೆ ಅಭಿವೃದ್ಧಿ ಬಗ್ಗೆ ಎಲ್ಲೆಡೆ ಚರ್ಚಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಕಾಮಗಾರಿಗಳು ಮತ್ತಷ್ಟು ವೇಗ ಪಡೆಯಲಿವೆ ಎಂದು ತಿಳಿಸಿದರು.

ಫುಡ್ ಕೋರ್ಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ:

ನಗರದ ಮೋದಿ ವೃತ್ತದ ಬಳಿಯ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದ ಪಕ್ಕದಲ್ಲಿ ₹50 ಲಕ್ಷ ರು.ವೆಚ್ಚದ ಫುಡ್‌ ಕೋರ್ಟ್ ನಿರ್ಮಾಣಕ್ಕೆ ಶುಕ್ರವಾರ ಗುದ್ದಲಿ ಪೂಜೆ ಹಾಗೂ ಸಿಸಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪಾದಚಾರಿ ವ್ಯಾಪಾರಿಗಳು ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು, ಸಾರ್ವಜನಿಕರಿಗೆ ಗುಣಮಟ್ಟದ ಉಪಹಾರ ನೀಡುವಲ್ಲಿ ಗಮನಹರಿಸಬೇಕು ಎಂದರು.

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಬೀದಿ ಬದಿ ವ್ಯಾಪಾರಿಗಳ ಪರ ನಿರಂತರವಾಗಿ ಜಿಲ್ಲಾ ಉಸ್ತುವಾರಿ ಸಚಿವ, ಪಾಲಿಕೆ ಆಯುಕ್ತರು, ಮತ್ತು ಮಹಾಪೌರರಿಗೆ ಮನವಿ ಸಲ್ಲಿಸುತ್ತಾ ಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದಂತೆ ಈ ಕಾರ್ಯಕ್ಕೆ ಚಾಲನೆ ನೀಡಿರುವುದು ಸಂತಸದ ವಿಷಯ ಎಂದರು.

ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಪಾಮೇನಹಳ್ಳಿ ನಾಗರಾಜ, ಎ.ನಾಗರಾಜ, ಬೂದಿಹಾಳ್ ಬಾಬು, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ಎಂ.ಡಿ.ವೀರೇಶ್ ಶೆಟ್ಟಿ, ಇಇ ಮನೋಹರ, ಎಇಇ ಪ್ರವೀಣ, ಮಲ್ಲಿಕಾರ್ಜುನ, ಕಲ್ಲಳ್ಳಿ ನಾಗರಾಜ, ಎಸ್.ಮಲ್ಲಿಕಾರ್ಜುನ, ವಾರ್ಡ್‌ನ ಹಿರಿಯರು, ನಿವಾಸಿಗಳಿದ್ದರು. ಎಇಇ ನವೀನ್, ಗುತ್ತಿಗೆದಾರ ಗಣೇಶ, ಕರವೇ ನಗರ ಉಪಾಧ್ಯಕ್ಷ ಜಿ.ಎಸ್. ಸಂತೋಷ್, ಪಾದಚಾರಿ ವ್ಯಾಪಾರಿ ಘಟಕದ ಅಧ್ಯಕ್ಷ ಸುರೇಶ್, ರಾಘವೇಂದ್ರ, ಚಂದ್ರು, ಮಂಜುನಾಥ್, ಕಲಾಲ್ ಚೌದ್ರಿ, ಧೀರೇಂದ್ರ, ಮಂಜುನಾಥ, ಸಾಗರ್, ರಮೇಶ, ಕರಿಬಸಪ್ಪ, ಬಸವರಾಜ, ದಾದಾಪೀರ್ ಇತರರಿದ್ದರು.

ಎಲ್ಲೆಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಭೂಮಿಪೂಜೆ

* 38ನೇ ವಾರ್ಡ್‌ನ 12 ನೇ ಮುಖ್ಯರಸ್ತೆಯ 2023-24ನೇ ಸಾಲಿನ ಎಸ್ ಎಫ್ ಐ ಮುಕ್ತನಿಧಿಯಡಿ ₹84 ಲಕ್ಷ ವೆಚ್ಚದ ನಿವೃತ್ತ ನೌಕರರ ಭವನದ ಮುಂಭಾಗ ಸಿಸಿ ರಸ್ತೆ ಅಭಿವೃದ್ಧಿ.

* ಬಾಪೂಜಿ ಪ್ರೌಢಶಾಲೆ ಮುಂಭಾಗ ಸ್ಮಾರ್ಟ್ ಸಿಟಿ ಯೋಜನೆಯಡಿ ಹೈಟೆಕ್ ಬಸ್‌ ನಿಲ್ದಾಣ ಉದ್ಘಾಟನೆ.

*1ನೇ ಕ್ರಾಸ್ 1ನೇ ಮುಖ್ಯರಸ್ತೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದ ಪಕ್ಕ ಬೀದಿ ವ್ಯಾಪಾರಸ್ಥರಿಗೆ ₹50 ಲಕ್ಷ ವೆಚ್ಚದಲ್ಲಿ ಫುಡ್ ಕೋರ್ಟ್, ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ.

* 7ನೇ ಮೇನ್‌ 4ನೇ ಕ್ರಾಸ್ ನಲ್ಲಿ ₹50 ಲಕ್ಷ ವೆಚ್ಚದಲ್ಲಿ ಫುಡ್ ಮಾರ್ಟ್, ಬಿಐಇಟಿ ರಸ್ತೆವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ.

* ₹40ಲಕ್ಷ ರುಪಾಯಿ ವೆಚ್ಚದಲ್ಲಿ 11 ನೇ ಮುಖ್ಯರಸ್ತೆಯ 6ನೇ ಕ್ರಾಸ್ ಮತ್ತು 12ನೇ ಎ ಮುಖ್ಯರಸ್ತೆಯ ಸಿಸಿ ರಸ್ತೆ ಹಾಗೂ ಬಾಪೂಜಿ ಮುಂಭಾಗದ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಸ್ಸೆಸ್ಸೆಂ ಚಾಲನೆ ನೀಡಿದ್ದಾರೆ.