ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ತಾಲೂಕಿನ ಹಂಪಾಪುರ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ಮಧ್ಯಾಹ್ನ 12 ರಿಂದ 12.30ಕ್ಕೆ ನಡೆದ ಬ್ರಹ್ಮರಥೋತ್ಸವಕ್ಕೂ ಮುನ್ನ ದೇವರನ್ನು ಅಲಂಕರಿಸಿ ಉಯ್ಯಾಲೆ ಆಡಿಸುತ್ತಾ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ಧಾರ್ಮಿಕ ವಿಧಿ ವಿಧಾನದಂತೆ ನಡೆದ ಪೂಜಾ ಕಾರ್ಯಕ್ರಮಗಳ ನಂತರ ಶಾಸಕ ಡಿ. ರವಿಶಂಕರ್ ಹಾಗೂ ನೆರೆದಿದ್ದ ನೂರಾರು ಭಕ್ತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದೇವರಿಗೆ ಜೈಕಾರ ಹಾಕುತ್ತಾ ರಥ ಎಳೆಯುವ ಮೂಲಕ ಅಮ್ಮನವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಬಿಸಿಲ ನಡುವೆಯೂ ಭಾರಿ ಸಂಖ್ಯೆಯಲ್ಲಿ ನೆರೆದ ಭಕ್ತರು, ಯುವಕರು, ಗ್ರಾಮದ ಹಿರಿಯರು ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದೇವಾಲಯದ ಸುತ್ತ ದೇವಿಗೆ ಜೈಕಾರ ಹಾಕುತ್ತಾ ರಥವನ್ನು ಎಳೆದು ತಂದು ನಿಲ್ಲಿಸಿದರು. ಮಹಿಳೆಯರು ದೇವರಿಗೆ ತಂಬಿಟ್ಟು ಆರತಿ ಮತ್ತು ಹಣ್ಣು ಕಾಯಿ ನೈವೇದ್ಯ ನೀಡಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಯುವಕರು ಹಾಗೂ ಯುವತಿಯರು ರಥದ ಮೇಲೆ ಹಣ್ಣು ಧವನ ಎಸೆದು ದೇವರಲ್ಲಿ ಪ್ರಾರ್ಥಿಸಿದರು.
ದೇವಸ್ಥಾನದ ಸುತ್ತಮುತ್ತ ತೋರಣಗಳು ಅಲಂಕೃತ ವಿದ್ಯುತ್ ದೀಪಗಳು ಕಂಗೊಳಿಸುತ್ತಿತ್ತು. ಗ್ರಾಮದ ವಿವಿಧ ಸಂಘ ಸಂಸ್ಥೆಗಳವರು ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ, ಪಾನಕ, ಮಜ್ಜಿಗೆ ವಿತರಣೆ ಮಾಡಿದರು.ಶಾಸಕ ಡಿ. ರವಿಶಂಕರ್ ಮಾತನಾಡಿ, ಮುಂಗಾರು ಮಳೇ ಜೋರಾಗಲಿ, ರೈತರಿಗೆ ಉತ್ತಮ ಬೆಳೆ ಫಸಲು ಬರಲಿ, ಸಮೃದ್ದವಾಗಿ ರೈತರಿಗೆ, ಜನರಿಗೆ ನೆಮ್ಮದಿಯನ್ನು ಶ್ರೀ ದುರ್ಗಾಪರಮೇಶ್ವರಿ ಕರುಣಿಸಲಿಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.
ಗ್ರಾಪಂ ಅಧ್ಯಕ್ಷೆ ವಿದ್ಯಾ ನಾರಾಯಣ್, ಎಪಿಎಂಸಿ ಮಾಜಿ ನಿರ್ದೇಶಕರಾದ ಎಚ್.ಪಿ. ಪ್ರಶಾಂತ್, ಬಿ.ಎಂ. ನಾಗರಾಜು, ನಾಗೇಂದ್ರ, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಪ್ರಕಾಶ್, ನಟರಾಜು, ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.