ಇಂದಿರಾ ಕ್ಯಾಂಟಿನ್‌ ಮೂಲಕ ಹಸಿವು ಮುಕ್ತ ರಾಜ್ಯ

| Published : Aug 25 2025, 01:00 AM IST

ಇಂದಿರಾ ಕ್ಯಾಂಟಿನ್‌ ಮೂಲಕ ಹಸಿವು ಮುಕ್ತ ರಾಜ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಬೇಕೆಂಬ ಸಂಕಲ್ಪದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದರು

ಕಾರಟಗಿ: ರಾಜ್ಯದಲ್ಲಿ ಪ್ರತಿಯೊಬ್ಬರು ಹಸಿವಿನಿಂದ ಬಳಲುಬಾರದು ಎನ್ನುವ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟಿನ್ ಪ್ರಾರಂಭಿಸುವ ಮೂಲಕ ಹಸಿವು ಮುಕ್ತ ರಾಜ್ಯ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿನ ಬಸ್‌ನಿಲ್ದಾಣ ಬಳಿಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಮಾಡಿ ಭಾನುವಾರ ಮಾತನಾಡಿದರು.

ಬಡವರು, ಕೂಲಿಕಾರರು, ರೈತರು, ಆರ್ಥಿಕವಾಗಿ ಹಿಂದುಳಿದ ಜನರು ಹಸಿವಿನಿಂದ ಬಳಲಬಾರದು. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಬೇಕೆಂಬ ಸಂಕಲ್ಪದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದರು. ಈ ವರ್ಷ ರಾಜ್ಯದಲ್ಲಿ ಮತ್ತೇ 300 ಇಂದಿರಾ ಕ್ಯಾಂಟಿನ್ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಈಗ ಕನಕಗಿರಿಯಲ್ಲಿಯೂ ಪ್ರಾರಂಭಿಸಲಾಗುವುದು. ಕೆಲವರು ಕಾರಟಗಿ ಇಂದಿರಾ ಕ್ಯಾಂಟಿನ್ ಪ್ರಾರಂಭಕ್ಕೆ ಅಡ್ಡಿ ಪಡಿಸಿದರು. ಇದು ಬಡವರ ಹೊಟ್ಟೆಯ ಮೇಲೆ ಗದಾಪ್ರಹಾರ ಮಾಡುವ ಹುನ್ನಾರ. ಏನೇ ಮಾಡಿದರೆ ರಾಜಕೀಯ ಮಾಡಿ ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ ಎಂದರು.

ಈಗ ಇಂದಿರಾ ಕ್ಯಾಂಟೀನ್ ಸೇರಿದಂತೆ ಕ್ಷೇತ್ರದಲ್ಲಿ ₹5.52 ಕೋಟಿ ರು. ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕನಕಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರೂಪುರೇಷೆ ಸಿದ್ಧಪಡಿಸಿದಂತೆ ಹಂತ ಹಂತವಾಗಿ ಜಾರಿ ಮಾಡಲಾಗುತ್ತದೆ. ಪಟ್ಟಣದಲ್ಲಿ ಐತಿಹಾಸಿಕ ಮಹದೇಶ್ವರ ದೇವಸ್ಥಾನದ ಪುಷ್ಕರಣಿಗೆ ಜೀರ್ಣೋದ್ಧಾರಕ್ಕೆ ₹1.50 ಕೋಟಿ ಮಂಜೂರಾಗಿದೆ. ಪಟ್ಟಣದ ಪೊಲೀಸ್ ಠಾಣೆಯಿಂದ ಎಪಿಎಂಸಿಯವರೆಗೂ ಆರ್‌ಜಿ ರಸ್ತೆ ಅಗಲೀಕರಣ ಮಾಡಿ ಡಿವೈಡರ್ ನಿರ್ಮಿಸಿ ರಸ್ತೆ ಮಧ್ಯ ಬೀದಿ ದೀಪ ಅಳವಡಿಸಲಾಗುವುದು. ಈ ಕಾಮಗಾರಿಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು. ಕಾರಟಗಿ ಪಟ್ಟಣದಲ್ಲಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಅಭಿವೃದ್ಧಿ ವಿಷಯದಲ್ಲಿ ದಯವಿಟ್ಟು ನನಗೆ ಸಹಕಾರ ನೀಡಿ. ಎಲ್ಲರಲ್ಲಿಯೂ ಕೈ ಮುಗಿದು ಕೇಳುವೆ. ಕಾರಟಗಿ ಬೃಹತ್ ನಿರ್ಮಾಣಕ್ಕೆ ಈಗಾಗಲೇ ಹಲವು ಕಾಮಗಾರಿಗಳ ಮಂಜೂರಾಗಿದೆ ಎಂದು ಹೇಳಿದರು.

ಪ್ರಜಾ ಸೌಧ,ನ್ಯಾಯಾಲಯ ಮತ್ತು ಬಸ್ ಡಿಪೋ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾಗಿದೆ. ಜತೆಗೆ ಕ್ರೀಡಾಂಗಣ ನಿರ್ಮಾಣ ಮಾಡಲು ಸಹ ಯೋಜನೆ ರೂಪಿಸಲಾಗಿದೆ. 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಕಾರ್ಯ ಸಹ ಶೀಘ್ರವೇ ಚಾಲನೆ ನೀಡಲಾಗುವುದು. ಜನತೆಗೆ ನೀಡಿದ ಭರವಸೆಯಂತೆ ಈಗ ಒಂದೊಂದಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಹೇಳಿದರು.

ಕಾರಟಗಿ ಬಸ್ ಡಿಪೋ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಪ್ರಜಾಸೌಧ ಮತ್ತು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ತೆಗೆದಿರಿಸಲಾಗಿದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ಕಾಮಗಾರಿ ಆರಂಭಿಸಲಾಗುವುದು. ಇನ್ನು ಕೆಕೆಆರ್‌ಡಿಬಿಯಿಂದ ಕನಕಗಿರಿ ಕ್ಷೇತ್ರಕ್ಕೆ ಒಟ್ಟು ₹ 200 ಕೋಟಿ ಮಂಜೂರು ಮಾಡಿಸಲಾಗಿದೆ. ಕ್ಷೇತ್ರದಲ್ಲಿ ಎಲ್ಲ ಗ್ರಾಮೀಣ ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ಮಾಣ ಮತ್ತು ಕೊಠಡಿಗಳ ದುರಸ್ತಿ ಸಹ ಸೇರಿಸಲಾಗಿದೆ. ಕಾರಟಗಿ ಪಟ್ಟಣಕ್ಕೆ ಒಂದು ಹೈಟೆಕ್ ಟಚ್ ಕೊಡಲಾಗುತ್ತಿದೆ ಎಂದರು.

ವಿವಿಧ ಕಾಮಗಾರಿ:

ಇದಕ್ಕೂ ಮುನ್ನ ಸಚಿವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 5 ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ನಂತರ ಬಸ್ ನಿಮ್ದಾಣದ ಆಟೋ ಸ್ಟಾಂಡ್ ಉದ್ಘಾಟಿಸಿದರು. ನಂತರ ಬರಗೂರು ಕುಂಟೋಜಿ ಮರಳಿ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು, ತಾಲೂಕಿನ ನಂದಿಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಗ 10 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸುರ, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ ಸದಸ್ಯರು ಹಾಗೂ ತಹಸೀಲ್ದಾರ ಎಂ. ಕುಮಾರಸ್ವಾಮಿ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ, ತಾಪಂ ಇಓ ಲಕ್ಷ್ಮೀದೇವಿ ಸೇರಿದಂತೆ ಮತ್ತಿತರರು ಇದ್ದರು.