ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಭಾರತ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ದೇಶಕ್ಕೆ ಅಗತ್ಯವಿರುವಷ್ಟು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಗ್ಯಾಸ್ ಅನ್ನು ಸಂಗ್ರಹಿಸಿಟ್ಟಿದೆ. ಯಾವುದೇ ಕಾರಣಕ್ಕೂ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ. ಸಾರ್ವಜನಿಕರು ಕೀಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಸ್ಪಷ್ಟಪಡಿಸಿದರು.ಪಟ್ಟಣದ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ದೇವರ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ವಿಶ್ವದ ಬಲಿಷ್ಠ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣವಿದ್ದದೆ. ಭಾರತದ ಮೇಲೆ ಅದರ ಪರಿಣಾಮ ಬೀರದಂತೆ ಪ್ರಧಾನಿ ನರೇಂದ್ರ ಮೋದಿಯವರು ವಹಿಸಿರುವ ಕಾಳಜಿಯನ್ನು ಹೊಂದಿದ್ದು, ಇರಾನ್ ಜೊತೆಗಿನ ಉತ್ತಮ ಬಾಂಧವ್ಯದಿಂದಾಗಿ ಭಾರತಕ್ಕೆ ತೈಲ ಹೊತ್ತು ತರುವ ಹಡುಗುಗಳಿಗೆ ಯಾವುದೇ ನಿರ್ಬಂಧ ವಿಧಿಸದಂತೆ ನೋಡಿಕೊಳ್ಳಲಾಗಿದೆ. ಪ್ರಧಾನಿಯವರು ಇರಾನ್ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದು, ತೈಲ ಆಮದು ಪ್ರಕ್ರಿಯೆ ಸರಾಗವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ.

ಇಂದು ಭಾರತವು ವಿಶ್ವದಾದ್ಯಂತ ಗೌರವಿಸಲ್ಪಡುವ ರಾಷ್ಟ್ರವಾಗಿದೆ. ನರೇಂದ್ರ ಮೋದಿಯವರು ಕೇವಲ ಒಂದು ಫೋನ್ ಕರೆಯ ಮೂಲಕ ರಷ್ಯಾ-ಉಕ್ರೇನ್ ಯುದ್ಧವನ್ನೇ ತಡೆಹಿಡಿದು ಭಾರತೀಯರನ್ನು ಕರೆತಂದ ಶಕ್ತಿ ಹೊಂದಿದ್ದಾರೆ. ಅದೇ ರೀತಿ ಅಮೇರಿಕ-ಇರಾನ್ ನಡುವಿನ ಸಂಘರ್ಷವನ್ನೂ ಶಾಂತಿಗೊಳಿಸಲು ಅವರು ಶ್ರಮಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ತಮಿಳುನಾಡಿನಲ್ಲಿ ಪ್ರಸ್ತುತ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ಧ ತೀವ್ರವಾದ ಆಡಳಿತ ವಿರೋಧಿ ಅಲೆ ಇದೆ. ಜನರು ಬದಲಾವಣೆ ಬಯಸುತ್ತಿದ್ದು, ಈ ಬಾರಿ ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿಕೂಟವು ಅಭೂತಪೂರ್ವ ಜಯ ದಾಖಲಿಸಲಿದೆ. ಮೋದಿಯವರ ನಾಯಕತ್ವ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯ ಬೆಳವಣಿಗೆಯು ಮೈತ್ರಿಕೂಟಕ್ಕೆ ಹೆಚ್ಚಿನ ಶಕ್ತಿ ತಂದಿದ್ದು ,ಡಿಎಂಕೆ ಸರ್ಕಾರ ಮತ್ತು ಸಿಎಂ ಸ್ಟಾಲಿನ್ ಅವರು ಸತತವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಮತ್ತು ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಸನಾತನ ಧರ್ಮದ ಕುರಿತಾದ ವಿವಾದಾತ್ಮಕ ಹೇಳಿಕೆಗಳನ್ನು ಜನರು ಮರೆತಿಲ್ಲ. ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರವು ವಿಫಲವಾಗಿದ್ದು, ಈ ಕಾರಣದಿಂದಾಗಿ ಮಹಿಳಾ ಮತದಾರರು ಈ ಚುನಾವಣೆಯಲ್ಲಿ ಡಿಎಂಕೆಗೆ ತಕ್ಕ ಪಾಠ ಕಲಿಸಲಿದ್ದಾರೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಕಪಾಲಿ ಶಂಕರ್, ಮುಖಂಡರಾದ ಯಲ್ಲಪ್ಪ,ಪ್ರದೀಪ್,ಬೋಪ್ಪನಹಳಿ ನಾರಾಯಣಪ್ಪ, ಶಂಕರ್ ರೆಡ್ಡಿ, ಚೆನ್ನಕೃಷ್ಣ, ಗಂಗಾಧರ್,ಜೀವನ್ ರೆಡ್ಡಿ,ಗುಲ್ಲೇಟಿ , ಶ್ರೀರಾಮ, ಸಂದೀಪ್,ಬಿಂದು ಮಾಧವ್, ಅಯ್ಯಪ್ಪ ಇದ್ದರು.