ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಬೆಡ್‌ಶೀಟ್‌ನಲ್ಲಿಸುತ್ತಿಟ್ಟು ಪರಾರಿಯಾಗಿದ್ದ ಆರೋಪಿ ಪತಿಯನ್ನು ಕುಂಬಳಗೂಡು ಠಾಣೆ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಬೆಡ್‌ಶೀಟ್‌ನಲ್ಲಿಸುತ್ತಿಟ್ಟು ಪರಾರಿಯಾಗಿದ್ದ ಆರೋಪಿ ಪತಿಯನ್ನು ಕುಂಬಳಗೂಡು ಠಾಣೆ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.ಬಿಹಾರ ಮೂಲದ ಧೀರಜ್ ಕುಮಾರ್ (24) ಬಂಧಿತ. ಆರೋಪಿಯು ಜು.27 ರಂದು ಗೇರುಪಾಳ್ಯದ ನಿವಾಸಿಯಾದ ಪತ್ನಿ ರೀಮಾ ಕುಮಾರ್‌ನನ್ನು (20) ಕೊಲೆಗೈದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ.
ಜು.29 ರಂದು ಮನೆಯಲ್ಲಿ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಸ್ಥಳೀಯರು ಮಾಹಿತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದಾಗ ಕೊಳತೆ ಸ್ಥಿತಿಯಲ್ಲಿ ರೀಮಾ ಕುಮಾರ್ ಮೃತದೇಹ ಪತ್ತೆಯಾಗಿತ್ತು.ಕಳೆದ ಡಿಸೆಂಬರ್‌ನಲ್ಲಿ ಕೆಲಸ ಅರಸಿಕೊಂಡು ನಗರಕ್ಕೆ ಬಿಹಾರ ಮೂಲದ ರೀಮಾ ಹಾಗೂ ಆಕೆಯ ಪತಿ ಧೀರಜ್ ಬಂದಿದ್ದರು. ಬಳಿಕ ನಗರ ಹೊರವಲಯದ ಗೇರುಪಾಳ್ಯದಲ್ಲಿ ನೆಲೆಸಿದ್ದರು. ಅಲ್ಲಿ ಸಮೀಪದ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ವಿಷಯಗಳಿಗೆ ರೀಮಾ ಹಾಗೂ ಧೀರಜ್ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದ.
ಮನೆಯವರಿಗೆ ತಿಳಿಸದೇ ಮದುವೆಯಾಗಿದ್ದ:ಆರೋಪಿ ರೀಮಾಳನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮನೆಯವರಿಗೆ ತಿಳಿಸದೇ 10 ತಿಂಗಳ ಹಿಂದೆ ಬಿಹಾರದಿಂದ ನಗರಕ್ಕೆ ಕರೆತಂದು ಮದುವೆಯಾಗಿದ್ದ. ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಆಕ್ರೋಶಗೊಂಡ ಆರೋಪಿ ರೀಮಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಇಟ್ಟು ಬಿಹಾರಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.