ಅನಾರೋಗ್ಯ ಪೀಡಿತ ತಮ್ಮ ಪತ್ನಿಯನ್ನು ಕೊಂದು ಬಳಿಕ ಬಿಎಂಟಿಸಿ ನಿವೃತ್ತ ಚಾಲಕರೊಬ್ಬರು ಆತ್ಮಹತ್ಯೆ ಶರಣಾಗಿರುವ ದಾರುಣ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅನಾರೋಗ್ಯ ಪೀಡಿತ ತಮ್ಮ ಪತ್ನಿಯನ್ನು ಕೊಂದು ಬಳಿಕ ಬಿಎಂಟಿಸಿ ನಿವೃತ್ತ ಚಾಲಕರೊಬ್ಬರು ಆತ್ಮಹತ್ಯೆ ಶರಣಾಗಿರುವ ದಾರುಣ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕೆಗೌಡನಪಾಳ್ಯದ ನಿವಾಸಿ ಬೇಬಿ (65) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಕುತ್ತಿಗೆ ಹಗ್ಗ ಜೀರಿಕೊಂಡು ಮನೆಯಲ್ಲಿ ಮೃತರ ಪತಿ ವೆಂಕಟೇಶನ್‌ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರು ಇಲ್ಲದ ವೇಳೆ ವೆಂಕಟೇಶನ್ ಈ ಕೃತ್ಯ ಎಸಗಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತರ ಕುಟುಂಬದವರು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಂಟಿಸಿಯಲ್ಲಿ ಚಾಲಕರಾಗಿ ನಿವೃತ್ತರಾದ ಬಳಿಕ ವೆಂಕಟೇಶನ್ ಅ‍ವರು, ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಚಿಕ್ಕೆಗೌಡನಪಾಳ್ಯದಲ್ಲಿ ನೆಲೆಸಿದ್ದರು. ಐದು ವರ್ಷಗಳ ಹಿಂದೆ ಅವರ ಪತ್ನಿ ಬೇಬಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದರು. ಈ ಆರೋಗ್ಯ ಸಮಸ್ಯೆಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪತ್ನಿ ಸುಧಾರಣೆ ಕಾಣಲಿಲ್ಲ. ಕೈ ಸ್ವಾಧೀನ ಕಳೆದುಕೊಂಡು ಗಾಲಿ ಕುರ್ಚಿಯಲ್ಲಿ ಓಡಾಡುತ್ತಿದ್ದರು. ಮಾತು ಸಹ ಆಡುತ್ತಿರಲಿಲ್ಲ. ಬಹಳ ಅಕ್ಕರೆಯಿಂದ ಪತ್ನಿಯನ್ನು ಕ್ಷೇಮ ನೋಡಿಕೊಂಡಿದ್ದ ವೆಂಕಟೇಶನ್ ಅವರಿಗೆ ಪತ್ನಿಯ ಪ್ರಸುತ್ತ ದಹನೀಯ ಪರಿಸ್ಥಿತಿ ನೋವುಂಟು ಮಾಡಿದೆ. ಈ ಯಾತನೆಯಲ್ಲೇ ನಿನ್ನನ್ನು ಈ ಸ್ಥಿತಿಯಲ್ಲಿ ನನ್ನಿಂದ ನೋಡಲಾಗುತ್ತಿಲ್ಲ. ನಿನ್ನನ್ನು ಕೊಂದು ತಾನು ಸಾಯುವುದಾಗಿ ವೆಂಕಟೇಶ್‌ ಹೇಳುತ್ತಿದ್ದರು. ಆಗ ಅವರಿಗೆ ಮಕ್ಕಳು ಸ್ವಾಂತನ ಹೇಳಿ ಸಮಾಧನಪಡಿಸಿದ್ದರು. ಈ ನೋವಿನಲ್ಲೇ ಅವರು ಮಂಗಳವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಪತ್ನಿಯನ್ನು ಕೊಂದು ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.