ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಪತ್ನಿ ಮಾಡಿದ ರೀಲ್ಸ್‌ನಿಂದ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ.
ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆ ಮಾಡಿಕೊಂಡವರು. ಮೃತ ಕುಮಾರ್ ಅವರ ಸೋದರ ಮಹಾದೇವಸ್ವಾಮಿ ಅವರು, ಘಟನೆಗೆ ಸಂಬಂಧಿಸಿದಂತೆ ಕುಮಾರ್ ಪತ್ನಿ ರೂಪಾ, ಆಕೆಯ ಸೋದರ ಮಾವ ಗೋವಿಂದ ವಿರುದ್ಧ ದೂರು ನೀಡಿದ್ದಾರೆ.
ಕಳೆದ ಫೆ.10 ರಂದು ರೂಪಾ ಅವರು ಗಂಡನ ಜೊತೆ ತಮ್ಮ ತವರು ಮನೆಯಾದ ಗುಂಡಾಪುರಕ್ಕೆ ತೆರಳಿದ್ದರು. ಒಂದು ದಿನ ಇದ್ದು ಕುಮಾರ್ ಅವರು ಮನೆಗೆ ವಾಪಸ್ಸಾಗಿದ್ದರು.
ರೂಪಾ ಅವರು ತವರು ಮನೆಯಲ್ಲೇ ಉಳಿದುಕೊಂಡಿದ್ದರು. ಈ ಮಧ್ಯೆ, ರೂಪಾ ಅವರು ತವರು ಮನೆಯಲ್ಲಿ ಇದ್ದ ವೇಳೆ, ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ‘ಕರಿಮಣಿ ಮಾಲೀಕ ನೀನಲ್ಲ’ ಎಂಬ ಹಾಡಿಗೆ ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದರು.
ರೂಪಾಳ ರೀಲ್ಸ್ ನೋಡಿ ಸ್ನೇಹಿತರು ಕುಮಾರ್ ಅವರನ್ನು ರೇಗಿಸಲು ಶುರು ಮಾಡಿದರು. ಈ ವಿಷಯವಾಗಿ, ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು.
ಕೊನೆಗೆ ಮನನೊಂದ ಪತಿ ಕುಮಾರ್, ಬುಧವಾರ ರಾತ್ರಿ ಮನೆಯ ಮುಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))