ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಪ್ರತಿಮಾ ತನ್ನ ಪತಿಗೆ ಆಹಾರದಲ್ಲಿ ಸೇರಿಸಿದ್ದ ವಿಷ ಪದಾರ್ಥದ ಮಾಹಿತಿ ಲಭಿಸಿದೆ. ಈ ವಿಷಕಾರಿ ಪದಾರ್ಥವನ್ನು ಆರ್ಸೆನಿಕ್ ಟ್ರೈಆಕ್ಸೈಡ್ ಎಂದು ಗುರುತಿಸಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದ್ದಾರೆ.ಈ ವಿಷವಸ್ತುವನ್ನು ಪ್ರತಿಮಾಳ ಪ್ರಿಯಕರ ದಿಲೀಪ್ ಹೆಗ್ಡೆ, ಉಡುಪಿಯ ಒಳಕಾಡು ರಾಮನ್ಸ್ ಲ್ಯಾಬ್‌ನಿಂದ ಪಡೆದಿದ್ದ. ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ರಾಮನ್ಸ್ ಲ್ಯಾಬ್ ಮಾಲೀಕನನ್ನು ಹಾಗೂ ಅವರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಜತೆಗೆ ಆರೋಪಿ ಪ್ರತಿಮಾಳಿಂದ 2 ಮೊಬೈಲ್, ದಿಲೀಪ್ ಹೆಗ್ಡೆಯಿಂದ 1 ಮೊಬೈಲ್ ಮತ್ತು 2 ಸಿಮ್ ಸೇರಿದಂತೆ ಒಟ್ಟು 4 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ದಿಲೀಪ್ ಹೆಗ್ಡೆಯ ಕಾರು ಹಾಗೂ ಬೈಕನ್ನು ಕೂಡ ವಶಕ್ಕೆ ಪಡೆಯಲಾಗಿದೆ.* ಲ್ಯಾಬ್‌ಗಳಲ್ಲಿ ಬಳಸುವ ರಾಸಾಯನಿಕ ವಸ್ತು:
ಆರ್ಸೆನಿಕ್ ಟ್ರೈಆಕ್ಸೈಡ್, ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತುವಾಗಿದೆ. ಇದನ್ನು ಹೆಚ್ಚಾಗಿ ಶಾಲಾ ಕಾಲೇಜುಗಳ ಲ್ಯಾಬ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಬಿಳಿ ಅಥವಾ ಹಳದಿ ಬಣ್ಣದ ಪುಡಿಯಾಗಿದ್ದು ವಾಸನೆಯಿಲ್ಲ, ಈ ವಿಷಕಾರಿ ವಸ್ತು ನೀರು, ಎಥೆನಾಲ್ ಮತ್ತು ಇತರ ಸಾವಯವ ದ್ರಾವಕಗಳಲ್ಲಿ ಕರಗುತ್ತದೆ.ಆರ್ಸೆನಿಕ್ ಟ್ರೈಆಕ್ಸೈಡ್ ಸೇವನೆಯಿಂದ ವಾಕರಿಕೆ, ಅತಿಸಾರ, ಹೊಟ್ಟೆ ನೋವು, ಆಯಾಸ, ತಲೆನೋವು, ತಲೆತಿರುಗುವಿಕೆ, ದೌರ್ಬಲ್ಯ, ರಕ್ತಹೀನತೆ, ಥ್ರಂಬೋಸೈಟೋಪೆನಿಯಾ (ಕಡಿಮೆ ಪ್ಲೇಟ್ಲೆಟ್ ಎಣಿಕೆ), ಲ್ಯುಕೋಪೆನಿಯಾ (ಕಡಿಮೆ ಬಿಳಿ ರಕ್ತ ಕಣಗಳ ಸಂಖ್ಯೆ, ಪ್ಲ್ಯಾಸ್ಟಿಕ್ ರಕ್ತಹೀನತೆ (ಮೂಳೆ ಮಜ್ಜೆಯ ವೈಫಲ್ಯ), ಕಾರ್ಡಿಯಾಕ್ ಆರ್ಹೆತ್ಮಿಯಾಸ್, ರಕ್ತ ಕಟ್ಟಿ ಹೃದಯ ಸ್ಥಂಭನ, ಉಸಿರಾಟದ ವೈಫಲ್ಯ, ರೋಗಗ್ರಸ್ತವಾಗುವಿಕೆಗಳು, ಕೋಮಾ, ನರವೈಜ್ಞಾನಿಕ ಹಾನಿ, ಹೆಪಟೊಟಾಕ್ಸಿಸಿಟಿ (ಯಕೃತ್ತಿನ ಹಾನಿ), ನೆಫ್ರಾಟಾಕ್ಸಿಸಿಟಿ (ಮೂತ್ರಪಿಂಡದ ಹಾನಿ), ಸೆಕೆಂಡರಿ ಕ್ಯಾನ್ಸರ್‌ಗಳು ಕಾಡುತ್ತವೆ. ಬಾಲಕೃಷ್ಣ ಅವರ ಪತ್ನಿ ಪ್ರತಿಮಾಳಿಗೆ ಆರ್ಸೆನಿಕ್ ಟ್ರೈಆಕ್ಸೈಡ್ ಎಂಬ ವಿಷ ಪದಾರ್ಥವನ್ನು ದಿಲೀಪ್ ಹೆಗ್ಡೆ ಉಡುಪಿಯ ಲ್ಯಾಬ್‌ನಿಂದ ತರಿಸಿ ನೀಡಿದ್ದ. ಪ್ರತಿಮಾ ನಿತ್ಯ ಅಹಾರದ ಜೊತೆ ಪತಿ ಬಾಲಕೃಷ್ಣಗೆ ಈ ರಾಸಾಯನಿಕ ವಸ್ತುವನ್ನು ಕರಗಿಸಿ ನೀಡುತಿದ್ದಳು. ಇದರಿಂದಾಗಿ ಬಾಲಕೃಷ್ಣ ಅಂಗಾಗಗಳ ಸಂವೇದನೆ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅ.20ರ ರಾತ್ರಿ ಆರೋಪಿಗಳಾದ ಪತ್ನಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ, ಬಾಲಕೃಷ್ಣ ಅವರನ್ನು ಉಸಿರು ಕಟ್ಟಿಸಿ ಕೊಲೆಗೈದಿದ್ದರು.