ಸಾರಾಂಶ
ಮಂಡ್ಯ : ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿ ಹಾಗೂ ಮಕ್ಕಳನ್ನು ಪತಿ ಮನೆಯಿಂದ ಹೊರಹಾಕಿದ್ದಾನೆ. ಮಧ್ಯರಾತ್ರಿ ಮನೆಯಿಂದ ಹೊರಹಾಕಿ ಮತಾಂತರ ಆಗುವಂತೆ ಆರೋಪಿ ಶ್ರೀಕಾಂತ್ ಕಿರುಕುಳ ನೀಡಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.
ಮತಾಂತರಕ್ಕೆ ಒಪ್ಪದ ಪತ್ನಿ-ಮಕ್ಕಳನ್ನು ಹೊರಹಾಕಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಪತಿಯ ನಡೆಯಿಂದ ಹತಾಶಳಾದ ಲಕ್ಷ್ಮೀ, ನೀವು ಹೇಳಿದಂತೆಯೇ ಕೇಳುತ್ತೇನೆ. ಬಾಗಿಲು ತೆಗೆಯಿರಿ ಎಂದು ರೋಧಿಸುತ್ತಾ ಅಂಗಲಾಚಿದರೂ ಬಾಗಿಲು ತೆರೆಯದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿ, ಅತ್ತೆ ಮೇಲೆ ಹಲ್ಲೆ ಪ್ರಕರಣ ಸಂಬಂಧ ಹಲ್ಲೆ ನಡೆಸುವ ಮುನ್ನ ಎರಡು ಕುಟುಂಬಗಳ ನಡುವೆ ಬೀದಿ ಜಗಳ ನಡೆದಿದೆ. ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ನಡೆದಿದ್ದ ರಂಪಾಟದ ವಿಡಿಯೋಗಳು ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.
ಚರ್ಚ್‌ಗೆ ಹೋಗಲು ಒಪ್ಪದಿದ್ದಕ್ಕೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಲಕ್ಷ್ಮೀ ಕಿಡಿಕಾರಿದ್ದು, ಮಾತುಕತೆಗಾಗಿ ರವಿ ಎಂಬುವರ ಮನೆಗೆ ಕರೆಸಿದ್ದಾಗ ಜಗಳ ಶುರುವಾಗಿದೆ. ಅಲ್ಲಿ ಎರಡು ಕುಟುಂಬಸ್ಥರು ಬೀದಿಯಲ್ಲಿ ಜಗಳ ಮಾಡಿಕೊಂಡು ರಂಪಾಟ ಮಾಡಿಕೊಂಡಿದ್ದಾರೆ. ಪರಸ್ಪರರು ಕೈಕೈ ಮಿಲಾಯಿಸಿ ಜಗಳ ಮಾಡಿಕೊಂಡಿದ್ದ ಲಕ್ಷ್ಮೀ ಹಾಗೂ ಶ್ರೀಕಾಂತ್ ಕುಟುಂಬಸ್ಥರ ಜಗಳದ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.
ನಾನು ಹಿಂದೂವಾಗೇ ಸಾಯಬೇಕು
ಕುಂಕುಮಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಕೈಗಳಿಗೆ ಬಳೆಗಳನ್ನು ಹಾಕುವುದಕ್ಕೂ ಸ್ವಾತಂತ್ರ್ಯವಿಲ್ಲ. ಮೊದಲು ನನ್ನನ್ನು ಚರ್ಚ್‌ಗೆ ಕರೆದುಕೊಂಡು ಹೋಗುತ್ತಿದ್ದರು. ನಾನೂ ಹೋಗುತ್ತಿದ್ದೆ. ಇತ್ತೀಚೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ನನ್ನನ್ನು ಪೀಡಿಸುತ್ತಿದ್ದಾರೆ. ನನ್ನ ಗಂಡನ ಮನೆಯವರೆಲ್ಲಾ ಮತಾಂತರಗೊಂಡಿದ್ದಾರೆ. ನನಗೆ ಇಷ್ಟವಿಲ್ಲ. ನಾನು ಹಿಂದೂವಾಗಿಯೇ ಸಾಯಬೇಕು.
- ಲಕ್ಷ್ಮೀ, ಸಂತ್ರಸ್ತೆ