ಸೌಹಾರ್ದತೆ ಸಾಮರಸ್ಯಕ್ಕೆ ಸಾಕ್ಷಿಯಾದ ಹುತ್ತರಿ ಹಬ್ಬ

| Published : Dec 16 2024, 12:47 AM IST

ಸಾರಾಂಶ

ಹಳೇ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಆಗಮಿಸಿ ಹುತ್ತರಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿ ಸೌಹಾರ್ದತೆಗೆ ಸಾಕ್ಷಿಯಾದರು. ಊಟ ಉಪಚಾರದೊಂದಿಗೆ ಹಬ್ಬವನ್ನು ಸಂಭ್ರಮಿಸಲಾಯಿತು.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗಿನ ಸುಗ್ಗಿಯ ಹಬ್ಬಕ್ಕೆ ಇಲ್ಲಿಗೆ ಸಮೀಪದ ಹಳೇ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಆಗಮಿಸಿ ಹುತ್ತರಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿ ಸೌಹಾರ್ದತೆಗೆ ಮಾದರಿಯಾದರು.

ವರ್ಷ ಪ್ರತಿ ಇಲ್ಲಿನ ಬೊಪ್ಪೇರ ಕಾವೇರಪ್ಪನವರು ಮತ್ತು ಅವರ ಮಗ ಜಯ ಉತ್ತಪ್ಪನವರು ತಮ್ಮ ಮನೆಯಲ್ಲಿ ಹುತ್ತರಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುತ್ತಾ ಬರುತ್ತಿದ್ದು ಇಲ್ಲಿನ ಮುಸ್ಲಿಂ ಜನಾಂಗದವರು ಇವರ ಮನೆಗೆ ತೆರಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದು ಇಲ್ಲಿ ಜಾತಿ, ಮತ, ಧರ್ಮ ಕಂಡು ಬರಲಿಲ್ಲ. ಬದಲಾಗಿ ಎಲ್ಲರೂ ಸಹೋದರರಂತೆ ಇದು ನಮ್ಮ ಮನೆಯ ಹಬ್ಬ ಎಂಬಂತೆ ಹಬ್ಬದಲ್ಲಿ ಪಾಲ್ಗೊಂಡರು. ಎಲ್ಲರ ಆಗಮನದ ನಂತರ ನೆರೆ ಕಟ್ಟಿ, ಕದಿರು ತೆಗೆದು, ಪ್ರಸಾದವನ್ನು ಸ್ವೀಕರಿಸಿ ಊಟ ಉಪಚಾರದೊಂದಿಗೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಈ ಸಮಯದಲ್ಲಿ ಪೋಲಿ ಪೋಲಿಯೇ ಬಾ ಎಂಬ ಉದ್ಘೋಷ ಹಾಗೂ ಪಟಾಕಿಗಳ ಆರ್ಭಟ ಮುಗಿಲಿಗೇರಿತು.

ಈ ಸಂದರ್ಭ ಮಾತನಾಡಿದ ಹಿರಿಯ ಬೊಪ್ಪೇರ ಕಾವೇರಪ್ಪನವರು, ನಾವು ಪ್ರತಿ ವರ್ಷವು ಹುತ್ತರಿ ಹಬ್ಬವನ್ನು ಆಚರಿಸುತ್ತ ಬರುತ್ತಿದ್ದು ನಮ್ಮ ನೆರೆಯವರಾದ ಮುಸ್ಲಿಂ ಬಾಂಧವರು ಪ್ರತಿ ವರ್ಷವು ನಮ್ಮ ಮನೆಗೆ ಬಂದು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ನಾವೆಲ್ಲರು ಸಹೋದರರಂತೆ ಅವರನ್ನು ಬರಮಾಡಿಕೊಂಡು ಹಬ್ಬವನ್ನು ಆಚರಿಸುತ್ತೇವೆ. ಇದು ನಮಗೆ ಸಂತೋಷವನ್ನುಂಟು ಮಾಡಿದೆ ಎಂದರು.

ಹಳೇತಾಲೂಕಿನ ಜಮಾಯತ್ ಮಾಜಿ ಆಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಬೊಪ್ಪೇರ ಕಾವೇರಪ್ಪನವರ ಮನೆ ನಮಗೆಲ್ಲ ಐನ್ ಇದ್ದಂತೆ. ಅವರ ಮನೆಯಲ್ಲಿ ಸುಮಾರು 35 ವರ್ಷಗಳಿಂದ ಊರವರೆಲ್ಲಾ ಸೇರಿ ಹುತ್ತರಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸುತ್ತೇವೆ ಎಂದರು.

ಈ ಸಂದರ್ಭ ಜಯ ಉತ್ತಪ್ಪ, ದಿವ್ಯ ಧರಣಿ ಉತ್ತಪ್ಪ, ರಿತೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಂಸ, ಎಸ್. ಎಸ್ ಇಬ್ರಾಹಿಂ, ಅಬೂ ಬುಕ್ಕರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.