ಇಲಾಖೆಯ 54 ಹುದ್ದೆಗಳಲ್ಲಿ 17 ಹುದ್ದೆಗಳು ಖಾಲಿ ಇವೆ. ಆದರೆ ಅನುಭವ, ನೈಪುಣ್ಯವೇ ಇಲ್ಲದ ಸಿಬ್ಬಂದಿಯಿಂದ ಹೇಗೆ ಕೆಲಸ ತೆಗೆದುಕೊಳ್ಳುವುದು,
ಹೂವಿನಹಡಗಲಿ: ಇಲ್ಲಿನ ತಹಸೀಲ್ದಾರ ಕಚೇರಿಯ ಬಹುತೇಕ ಹುದ್ದೆಗಳಲ್ಲಿ ಸಿಬ್ಬಂದಿ ಪ್ರಭಾರವಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಒಳ ಆಡಳಿತವು ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯಭಾರ ಒತ್ತಡ ಹೆಚ್ಚಿದ್ದು, ಸಿಬ್ಬಂದಿಗಳೆಲ್ಲ ಶುಕ್ರವಾರ ಸಾಮೂಹಿಕ ರಜೆ ಹಾಕಿ ಜಿಲ್ಲಾಧಿಕಾರಿ ಭೇಟಿಗೆ ಹೋಗಿದ್ದರು.
ಇಲಾಖೆಯ 54 ಹುದ್ದೆಗಳಲ್ಲಿ 17 ಹುದ್ದೆಗಳು ಖಾಲಿ ಇವೆ. ಆದರೆ ಅನುಭವ, ನೈಪುಣ್ಯವೇ ಇಲ್ಲದ ಸಿಬ್ಬಂದಿಯಿಂದ ಹೇಗೆ ಕೆಲಸ ತೆಗೆದುಕೊಳ್ಳುವುದು, 3 ರಿಂದ 4 ಶಾಖೆಗಳಲ್ಲಿ ಒಬ್ಬ ವ್ಯಕ್ತಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನ ಬೆಳಗಾಗುತ್ತಲೇ ಹತ್ತಾರು ಯೋಜನೆ, ಜಿಲ್ಲಾಧಿಕಾರಿ ಕಚೇರಿಗೆ ಕೇಳಿದ ಮಾಹಿತಿ ಸಂಗ್ರಹಿಸಿ ಕಳಿಸುವುದು, ಮೀಟಿಂಗ್ ಸೇರಿದಂತೆ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.ಸಾಮೂಹಿಕ ರಜೆ ಹಾಕಿ ಜಿಲ್ಲಾಧಿಕಾರಿ ಭೇಟಿ ಮಾಡಿ ಸಿಬ್ಬಂದಿ ಕೊರತೆ ನೀಗಿಸಿ, ಇಲ್ಲವೇ ನಾವೆಲ್ಲ ಆರೋಗ್ಯ ನೆಪವೊಡ್ಡಿ ಸಾಮೂಹಿಕ ರಜೆ ಹಾಕಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತು ಹೇಳಿದ್ದಾರೆ.
ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ ಗ್ರೇಡ್-2 ಹುದ್ದೆ ಖಾಲಿ ಸೇರಿದಂತೆ ಉಪ ತಹಸೀಲ್ದಾರ-2, ಪಹಣಿ ತಿದ್ದುಪಡಿ ಶಾಖೆ, ವಿವಿಧ ಯೋಜನೆಗಳ ಮಂಜೂರಾತಿ ಶಾಖೆ, ಹಿರೇಹಡಗಲಿ ಕಂದಾಯ ನಿರೀಕ್ಷಕ, ದ್ವಿತೀಯ ದರ್ಜೆ ಸಹಾಯಕರು 5, ಶಿರಸ್ತೇದಾರರು 2, ಪ್ರಥಮ ದರ್ಜೆ ಸಹಾಯಕರು 2, ಆಹಾರ ಇಲಾಖೆ ಶಿರಸ್ತೇದಾರ, ದ್ವಿತೀಯ ದರ್ಜೆ ಸಹಾಯಕ ಹೀಗೆ 17 ಹುದ್ದೆಗಳು ಖಾಲಿ ಇವೆ.ಗ್ರೇಡ್-1 ಮತ್ತು ಗ್ರೇಡ್-2 ತಹಸೀಲ್ದಾರ್ ಹುದ್ದೆ ಒಬ್ಬರೇ ನಿರ್ವಹಿಸುತ್ತಿದ್ದಾರೆ. 6ರಿಂದ 8 ತಾಸು 36 ಫಾರಂಗಳಿಗೆ ಆನ್‌ಲೈನ್ ಮಂಜೂರಾತಿ ನೀಡಬೇಕಿದೆ. ಮುಂದೆ ಬೆಳೆ ಧೃಢೀಕರಣ, ಎಸ್‌ಐಆರ್ ಸೇರಿದಂತೆ ಇನ್ನಿತರ ಕಚೇರಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಕಾಡುತ್ತಿದೆ.
ಕಂದಾಯ ಇಲಾಖೆ ಕಚೇರಿಯ ಎಸ್‌ಡಿಎ ಬಾಲಬಸವ, ರಾಜು ಇಬ್ಬರೂ ಕಳೆದ 7 ತಿಂಗಳಿಂದ ಅನಧಿಕೃತ ಗೈರಾಗಿದ್ದಾರೆ. ವರಕನಹಳ್ಳಿ, ಭೂಮಿ ಕೇಂದ್ರದ ಇಬ್ಬರೂ ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ನಿಯೋಜನೆಯಾಗಿದ್ದಾರೆ. ಕೆಲ ಮಹಿಳಾ ಸಿಬ್ಬಂದಿ ಹೆರಿಗೆ ರಜಾ, ಆರೋಗ್ಯ ರಜಾ ಪಡೆದಿದ್ದಾರೆ.ಸಿಬ್ಬಂದಿ ಕೊರತೆ ಮಧ್ಯೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಇದರಿಂದ ನಮ್ಮ ಖಾಸಗಿ ಬದುಕನ್ನೇ ಮರೆತಿದ್ದೇವೆ. ಬಹುತೇಕ ಹುದ್ದೆಗಳು ಪ್ರಭಾರ ಇವೆ. ಕೌಶಲ್ಯ ಇಲ್ಲದಿದ್ದರೂ ಕೆಲಸ ಮಾಡುತ್ತಿದ್ದೇವೆ. ಕಾರ್ಯಭಾರ ಹೆಚ್ಚಾಗಿದೆ. ಪ್ರತಿ ಕಡತಗಳನ್ನು ಆನ್‌ಲೈನ್‌ನಲ್ಲಿ ದಾಖಲೀಕರಣ ಆಗಿರುವುದರಿಂದ ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಎಷ್ಟೇ ತೊಂದರೆ ಇದ್ದರೂ ರಾತ್ರಿವರೆಗೂ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ನಮ್ಮ ಅಳಲು ತೋಡಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿಗೆ ಹೋಗಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ.
ಕೆಲಸದ ಸಂದರ್ಭದಲ್ಲಿ ನಿತ್ಯ ರೈತರು, ಸಾರ್ವಜನಿಕರಿಂದ ಕಚೇರಿ ಗಿಜಿಗುಡುತ್ತಿತ್ತು. ಆದರೆ ಕಚೇರಿಯಲ್ಲಿ ಸಿಬ್ಬಂದಿ ಸಾಮೂಹಿಕ ರಜೆ ಹಾಕಿರುವ ಕಾರಣ ಜನರಿಲ್ಲದೇ ಭಣಗುಡುತ್ತಿತ್ತು.ಕಚೇರಿಯ ಒಳ ಆಡಳಿತ ಸಿಬ್ಬಂದಿಯವರು ಸಾಮೂಹಿಕವಾಗಿ ಶುಕ್ರವಾರ ರಜೆ ಹಾಕಿದ್ದಾರೆ. ಕಚೇರಿಯಲ್ಲಿ ಯಾರೂ ಇಲ್ಲ. ಜಿಲ್ಲಾಧಿಕಾರಿ ಭೇಟಿಗೆ ಹೋಗಿದ್ದಾರೆ. ಇಲಾಖೆಯಲ್ಲಿನ 54 ಹುದ್ದೆಗಳ ಪೈಕಿ 17 ಹುದ್ದೆಗಳು ಖಾಲಿ ಇವೆ ಎನ್ನುತ್ತಾರೆ ತಹಸೀಲ್ದಾರ ಕೆ.ಎಂ. ಗುರುಬಸವರಾಜ.