ಹೂವಿನಹಡಗಲಿ: ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಶೇ. 86.68ರಷ್ಟು ಸಾಧನೆಯಾಗಿದೆ ಎಂದು ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ಹೇಳಿದರು.

ಇಲ್ಲಿನ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಬಿಎಲ್‌ಒ ಮತ್ತು ರಾಜಕೀಯ ಪಕ್ಷದ ಬಿಎಲ್‌ಎಗಳಿಗೆ ಕರೆಯಲಾಗಿದ್ದ, ಎಸ್‌ಐಆರ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಪಟ್ಟಣದ ಕೆಲ ಬೂತ್‌ಗಳಲ್ಲಿ ಜನ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರಿಗೆ ನೀಡಿರುವ ಎಸ್‌ಐಆರ್‌ ಫಾರಂಗಳನ್ನು ಮರಳಿ ಕೊಡುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಅವರ ಮನೆಗಳಿಗೆ ಹೋಗಿದ್ದೇವೆ ಎಂದು ರಾಜಕೀಯ ಪಕ್ಷದ ಬಿಎಲ್‌ಎ ಸಭೆಯ ಗಮನಕ್ಕೆ ತಂದರು.

ಎಲ್ಲ ಬಿಎಲ್‌ಒಗಳು ಎಸ್‌ಐಆರ್‌ ಫಾರಂಗಳ ವಿತರಣೆಯಲ್ಲಿ ಶೇ. 100ರಷ್ಟು ಸಾಧನೆಯಾಗಿದೆ. ಜತೆಗೆ ಕೆಲ ವಾರ್ಡ್‌ಗಳಲ್ಲಿ ಡಿಜಿಟಲೀಕರಣ ಮಂದಗತಿಯಲ್ಲಿದೆ. ಮತದಾರರ ಪಟ್ಟಿಯಲ್ಲಿ ಸಣ್ಣ-ಪುಟ್ಟ ದೋಷಗಳಿವೆ. ಅವುಗಳನ್ನು ಸರಿಪಡಿಸುವ ಉದ್ದೇಶವೇ ಇದಾಗಿದೆ. ಯಾವುದೇ ಕಾರಣಕ್ಕೂ ನೈಜ ಮತದಾರರು ಮತದಾರರ ಪಟ್ಟಿಯಿಂದ, ಹೊರಗೆ ಉಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಎಲ್‌ಒಗಳಿಗೆ ಸೂಚಿಸಿದರು.

ಓರ್ವ ಮತದಾರನ ಹೆಸರು ಸ್ಕ್ಯಾನ್‌ ಮಾಡಿದರೇ ಬೇರೆ ಹೆಸರು ಬರುತ್ತದೆ. ಇಂತಹ 30 ಪ್ರಕರಣಗಳು ಅಲ್ಲಿಪುರ ಗ್ರಾಮದಲ್ಲಿವೆ ಎಂದು ಬಿಎಲ್‌ಒ ಹೇಳಿಕೆಗೆ ಸ್ಪಂದಿಸಿದ ಚುನಾವಣೆ ಸಿಬ್ಬಂದಿ ಕುಬೇರನಾಯ್ಕ, ಇಷ್ಟೊಂದು ಪ್ರಮಾಣದಲ್ಲಿ ಸಂಖ್ಯೆ ಇರಲು ಸಾಧ್ಯವಿಲ್ಲ. ಇದು ನೀವು ಹೊಸ ರೀತಿಯ ಪ್ರಕರಣ ಹೇಳುತ್ತಿದ್ದೀರಿ. ಇದರಲ್ಲಿ ತಾಂತ್ರಿಕ ದೋಷಗಳಿದ್ದರೆ ಕೂಡಲೇ ಸರಿಪಡಿಸುತ್ತೇವೆ ಎಂದರು.


ಪಟ್ಟಣದ ವಾರ್ಡ್‌ವೊಂದರಲ್ಲಿ 150ಕ್ಕೂ ಹೆಚ್ಚು ಮತದಾರರ ವಿಳಾಸ ಸರಿಯಾಗಿಲ್ಲ. ಈ ವರೆಗೂ ಅವರ ಸ್ಥಳ ಗುರುತು ಸಿಗುತ್ತಿಲ್ಲ. ಎಲ್ಲಿ ಇದ್ದಾರೆಂಬ ಮಾಹಿತಿ ಸಿಗುತ್ತಿಲ್ಲ. ಇಂತಹ ಪ್ರಕರಣಗಳ ಕುರಿತು ಏನು ಮಾಡಬೇಕೆಂಬ ಮಾಹಿತಿಯೇ ಇಲ್ಲ ಎಂದು ರಾಜಕೀಯ ಪಕ್ಷದ ಬಿಎಲ್‌ಎ ಸಭೆ ಗಮನಕ್ಕೆ ತಂದಾಗ, ಮೊದಲು ಮತದಾರರಿಗೆ ಫಾರಂ ವಿತರಿಸಿ ಅವರಿಂದ ಮಾಹಿತಿ ಪಡೆದು ಅವುಗಳನ್ನು ಡಿಜಟಲೀಕರಣ ಮಾಡಿ, ನಂತರದಲ್ಲಿ ಉಳಿದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಎಲ್ಲ ಪಕ್ಷಗಳ ಮುಖಂಡರು ತಮ್ಮ ಬಿಎಲ್‌ಎಗಳು ನಮ್ಮ ಎಸ್‌ಐಆರ್‌ ಸಿಬ್ಬಂದಿಗೆ ಸಹಕಾರ ನೀಡಿದರೆ ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ಹೇಳಿದರು.

ಕೆಲವಡೆ ಅಂಗನವಾಡಿ ಕಾರ್ಯಕರ್ತೆಯರು ಗೌರವ ಧನ ಇಲ್ಲದೇ, ಎಸ್‌ಐಆರ್‌ ಸಿಬ್ಬಂದಿಗೆ ಸಹಾಯ ಮಾಡಿರುವ ಕಾರಣ ಶೇ. 86.68ರಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಈ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ. ಹನುಮಂತಪ್ಪ, ತಾಪಂ ಇಒ ಜಿ. ಪರಮೇಶ್ವರ, ಪುರಸಭೆ ಮುಖ್ಯಾಧಿಕಾರಿ ಜಿ. ಹನುಮಂತಪ್ಪ ಇದ್ದರು.