ಸಾರಾಂಶ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಹೆಚ್ಚುವರಿ ಪಟ್ಟಿಯಲ್ಲಿ ವಿಷಯ ಸೇರ್ಪಡೆ ಕುರಿತಂತೆ ಕಾಂಗ್ರೆಸ್ ಸದಸ್ಯರು ನಡೆಸಿದ ಪ್ರತಿಭಟನೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಮೇಯರ್ ಜ್ಯೋತಿ ಪಾಟೀಲ ತಮ್ಮ ಮೊದಲ ಸಭೆಯಲ್ಲಿ ಗದ್ದಲ ಮಾಡಿ ಸಭೆಗೆ ಅಡ್ಡಿ ಮಾಡುತ್ತಿದ್ದ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳ ಮೂಲಕ ಹೊರಹಾಕಿದರು. ಅಲ್ಲದೇ, ಮೂವರನ್ನು ಅಮಾನತು ಕೂಡ ಮಾಡಿದರು.ಈ ನಡುವೆ ಪ್ರತಿಪಕ್ಷದ ಸದಸ್ಯರನ್ನು ಹೊತ್ತುಕೊಂಡು ಹೊರ ಹಾಕುವ ವೇಳೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಬಿದ್ದು ಅಸ್ವಸ್ಥಗೊಂಡಿದ್ದು ನಡೆಯಿತು.
ಆಗಿದ್ದೇನು?: ಮುಖ್ಯಮಂತ್ರಿ ವಿವೇಚನೆ ಅಡಿ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ಅನುದಾನ ಮಂಜೂರಾಗಿದೆ. ಇದರ ಕ್ರಿಯಾಯೋಜನೆಯನ್ನು ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಸೇರಿಸಬೇಕು. ಈ ಬಗ್ಗೆ ಚರ್ಚೆ ಮಾಡಿ ಕ್ರಿಯಾಯೋಜನೆಗೆ ಸಭೆ ಅನುಮೋದನೆ ನೀಡಬೇಕು ಎಂಬುದು ವಿರೋಧ ಪಕ್ಷದ ಸದಸ್ಯರ ಪಟ್ಟು. ಸಭೆ ಆರಂಭವಾಗುತ್ತಿದ್ದಂತೆ ಈ ಕುರಿತು ವಿಷಯ ಪ್ರಸ್ತಾಪಿಸಿ ಪ್ರತಿಭಟನೆ ಶುರು ಹಚ್ಚಿಕೊಂಡರು. ಇದರಿಂದಾಗಿ ಸಭೆ ಆರಂಭವಾಗುತ್ತಿದ್ದಂತೆ ಗೌಜು, ಗದ್ದಲ ಜೋರಾಯಿತು. ಎರಡು ಬಾರಿ ಮೇಯರ್ ಸಭೆ ಮುಂದೂಡಿದರು.ಮೇಯರ್ ಕೊಠಡಿಯಲ್ಲಿ ಎರಡು ಬಾರಿ ಪ್ರತಿಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಿದರು. ಆದರೂ ಪ್ರತಿಪಕ್ಷದ ಸದಸ್ಯರು ಮಾತ್ರ ತಮ್ಮ ಪಟ್ಟಿನಿಂದ ಹಿಂದಕ್ಕೆ ಸರಿಯಲೇ ಇಲ್ಲ. ಇತ್ತ ಸಾಮಾನ್ಯಸಭೆ ಪುನಾರಂಭಗೊಳ್ಳುತ್ತಿದ್ದಂತೆ ಮತ್ತೆ ಪ್ರತಿಭಟನೆ ಶುರು ಹಚ್ಚಿಕೊಳ್ಳುತ್ತಿದ್ದರು.
ಮೇಯರ್ ಜ್ಯೋತಿ ಪಾಟೀಲ, ಇದು ಮುಂದುವರಿದ ಸಭೆ. ಇಲ್ಲಿ ಹೆಚ್ಚುವರಿ ವಿಷಯ ಪಟ್ಟಿ ಮಾಡಲು ಬರಲ್ಲ. ಹಿಂದಿನ ಸಭೆಯಲ್ಲಿನ ಪಟ್ಟಿಯಲ್ಲಿನ ವಿಷಯಗಳನ್ನಷ್ಟೇ ಚರ್ಚಿಸಲಾಗುತ್ತದೆ ಎಂದು ಎರಡ್ಮೂರು ಬಾರಿ ತಿಳಿ ಹೇಳಿದರು. ಹೀಗೆ ಮುಂದುವರಿಸಿದರೆ, ಸಭೆಗೆ ಅಡ್ಡಿ ಪಡಿಸಿದರೆ ಸಭೆಯಿಂದ ಹೊರಹಾಕಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆಯನ್ನೂ ನೀಡಿದರು.ಆದರೂ ಸಭೆಯಲ್ಲಿ ಶಾಂತತೆ ಮರಳಲಿಲ್ಲ. ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳದೇ, ಮೇಯರ್ ಪೀಠದ ಎದುರು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಸಭೆಗೆ ತೀವ್ರ ಅಡ್ಡಿ ಪಡಿಸಿದ ಸುವರ್ಣ ಕಲ್ಲಕುಂಟ್ಲಾ, ದೊರಾಜ ಮಣಿಕುಂಟ್ಲಾ, ರಾಜಶೇಖರ ಕಮತಿ ಈ ಮೂವರನ್ನು ಸಭೆಯಿಂದ ಅಮಾನತು ಮಾಡಿ ರೂಲಿಂಗ್ ನೀಡಿದರು. ಜತೆಗೆ ಪ್ರತಿಪಕ್ಷದ ಸದಸ್ಯರನ್ನು ಹೊರಹಾಕುವಂತೆ ಆಯುಕ್ತರಿಗೆ ಸೂಚಿಸಿದರು. ಮಾರ್ಷಲ್‌ಗಳು ಆಗಮಿಸಿ ಸದಸ್ಯರನ್ನು ಹೊರಹಾಕಿದರು.
ಎಡವಟ್ಟು: ಸಭೆಯಿಂದ ಅಮಾನತು ಆದ ರಾಜಶೇಖರ ಕಮತಿ, ದೊರಾಜ ಮಣಿಕುಂಟ್ಲಾ ಅವರನ್ನು ಹೊತ್ತುಕೊಂಡು ಮಾರ್ಷಲ್‌ಗಳು ಹೊರಹಾಕಲು ಮುಂದಾದರು. ಆದರೆ ಸುವರ್ಣ ಅವರನ್ನು ಹೊತ್ತುಕೊಂಡು ಹೊರಹೋಗುತ್ತಿದ್ದ ವೇಳೆ ಮಾರ್ಷಲ್‌ಗಳ ನಿಯಂತ್ರಣ ತಪ್ಪಿ ಸುವರ್ಣ ಕೆಳಕ್ಕೆ ಬಿದ್ದರು. ಆಗ ಅವರಿಗೆ ಎದೆನೋವು ಸಹ ಕಾಣಿಸಿಕೊಂಡಿತು. ಸಭೆಯಿಂದ ಕೆಳಗೆ ಬಂದ ಮೇಯರ್ ಜ್ಯೋತಿ ಪಾಟೀಲ, ಸುವರ್ಣ ಅವರ ಆರೋಗ್ಯ ವಿಚಾರಿಸಿ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ ದಂಡಪ್ಪನವರ ಅವರಿಗೆ ಸೂಚಿಸಿದರು. ಸಂಜೆವರೆಗೂ ಅವರಿಗೆ ಚಿಕಿತ್ಸೆ ನೀಡಲಾಯಿತು.ಸದಸ್ಯರ ಸಭಾತ್ಯಾಗ: ತಮ್ಮ ಸದಸ್ಯರನ್ನು ಅನಗತ್ಯವಾಗಿ ಹೊರಗೆ ಹಾಕಿಸಿ ಸಭೆ ಮಾಡುತ್ತಿರುವ ಮೇಯರ್ ನಡೆ ಸರಿಯಲ್ಲ. ಅವರು ಮೇಯರ್ ಪೀಠದ ಘನತೆಗೆ ತಕ್ಕಂತೆ ವರ್ತಿಸದೇ ಬಿಜೆಪಿ ನಾಯಕರಂತೆ ಹಾಗೂ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ, ಪ್ರತಿಪಕ್ಷದ ನಾಯಕ ಇಮ್ರಾನ್ ಯಲಿಗಾರ ಸೇರಿದಂತೆ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತ ಸಭೆಯಿಂದ ಹೊರಗೆ ಬಂದರು. ಈ ವೇಳೆ ಪ್ರತಿಪಕ್ಷ ನಾಯಕರು ಹಾಗೂ ಸದಸ್ಯರನ್ನು ಸ್ವತಃ ಮೇಯರ್, ಉಪಮೇಯರ್ ಹಾಗೂ ಪಾಲಿಕೆ ಆಯುಕ್ತರು ಮನವೊಲಿಸುವ ಪ್ರಯತ್ನ ಮಾಡಿದರೂ, ಅದು ಫಲಕಾರಿಯಾಗಲಿಲ್ಲ. ಆಗ ಸಭೆಯನ್ನು ಅರ್ಧ ಗಂಟೆಕಾಲ ಮುಂದೂಡಲಾಯಿತು. ನಂತರ ಆರಂಭವಾದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಲ್ಲಿಯೇ ಮೇಯರ್ ಜ್ಯೋತಿ ಪಾಟೀಲ ತಮ್ಮ ಮೊದಲ ಸಭೆಯನ್ನು ಮುಂದುವರಿಸಿದರು.
₹10 ಕೋಟಿ ಅನುದಾನದ ವಿಷಯವನ್ನು ಹಿಂದಿನ ಸಭೆಯ ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಹಾಕಿಯೇ ಇಲ್ಲ. ಆದರೂ ಅದನ್ನು ಏಕೆ ಪಟ್ಟಿಯಲ್ಲಿ ಸೇರಿಸಿದ್ದೀರಿ ಎಂದು ಪಾಲಿಕೆಯ ಸೆಕ್ರೆಟರಿ ಇಸ್ಮಾಯಿಲ್ ಶಿರಹಟ್ಟಿ ವಿರುದ್ಧ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.ಒಟ್ಟಿನಲ್ಲಿ ಪಾಲಿಕೆ ಸಾಮಾನ್ಯಸಭೆ ಗೊಂದಲದ ಗೂಡಾಗಿ ಹೈಡ್ರಾಮಾ ಆದಂತಾಗಿತ್ತು.
₹10 ಕೋಟಿ ಅನುದಾನದ ಕ್ರಿಯಾ ಯೋಜನೆಯನ್ನು ಹಿಂದಿನ ಸಭೆಯಲ್ಲಿ ಪರಿಗಣಿಸಿಲ್ಲ. ಇದು ಕೇವಲ ಹಿಂದಿನ ಸಭೆಯಲ್ಲಿನ ವಿಷಯಗಳನ್ನು ಮಾತ್ರ ಚರ್ಚಿಸಲು ಅವಕಾಶವಿದೆ. ಈ ವಿಷಯ ತಿಳಿಸಿದರೂ ಸಭೆಗೆ ಅಡ್ಡಿ ಪಡಿಸಿದರು. ಹೀಗಾಗಿ ಮೂವರನ್ನು ಅಮಾನತು ಮಾಡಿ ಹೊರಹಾಕಿಸಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.ಮೇಯರ್ ಜ್ಯೋತಿ ಪಾಟೀಲ ಬಿಜೆಪಿ ಮೇಯರ್ ಅವರಂತೆ ವರ್ತಿಸುತ್ತಿದ್ದಾರೆ. ಸರ್ವಾಧಿಕಾರಿ ತರಹ ನಡೆದುಕೊಂಡರು. ನ್ಯಾಯಯುತ ಬೇಡಿಕೆಯಿಟ್ಟಾಗ ಸಭೆಯಿಂದ ಹೊರಹಾಕಿ ಸಭೆ ನಡೆಸಿದರು. ಮೇಯರ್ ಅವರ ನಡವಳಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಇಮ್ರಾನ್ ಎಲಿಗಾರ ಹೇಳಿದರು.