ಸಾರಾಂಶ
ಹಳಿಯಾಳ: ನನ್ನ ಹೆಸರು ರಘುನಾಥ, ನನ್ನ ಹೆಸರಿನಲ್ಲಿ ಪ್ರಭು ಶ್ರೀರಾಮನಿದ್ದಾರೆ. ನಾನು ಶ್ರೀರಾಮರ ಪರಮಭಕ್ತ, ಶ್ರೀರಾಮನ ಪೂಜೆ ನಿತ್ಯವೂ ಮಾಡುತ್ತೇನೆ. ಶ್ರೀರಾಮರ ಆದರ್ಶಗಳ ಪಾಲನೆಯಾಗಬೇಕೆ ವಿನಃ ದೇವರ ಹೆಸರಿನಲ್ಲಿ ರಾಜಕೀಯ ಆಶ್ರಯ ಹುಡುಕಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ನಾನು ಪತ್ನಿ ಜತೆ ಎರಡೂ ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿ ಪೂಜೆ ಸಲ್ಲಿಸಿ, ದರ್ಶನ ಪಡೆದು ಬಂದಿದ್ದೇವೆ ಎಂದರು.ರಾಜಕಾರಣ ಬೇಡ: ಅಯೋಧ್ಯೆಯ ಶ್ರೀರಾಮಮಂದಿರವಾಗಲಿ ಅಥವಾ ಶ್ರೀರಾಮದೇವರ ಬಗ್ಗೆ ಅನಗತ್ಯವಾದ ರಾಜಕೀಯ ಚರ್ಚೆ ಆಗುವುದು ವಿಷಾದನೀಯ. ರಾಜಕಾರಣ ಎಲ್ಲಿ ಮಾಡಬೇಕೋ ಅಲ್ಲಿಯೇ ಮಾಡಬೇಕೇ ವಿನಃ ಎಲ್ಲ ಕಡೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನವು ಶ್ರೀ ರಾಮನ ಅನುಗ್ರಹದಿಂದಲೇ ಆರಂಭಗೊಂಡಿದೆ. ಅದರಲ್ಲಿ ಎಲ್ಲ ಜನಾಂಗದ ಜನರು ಇದ್ದಾರೆ. ಈ ರಾಮಮಂದಿರ ನಿರ್ಮಾಣವಾಗಬಾರದೆಂದು ಯಾರೂ ವಿರೋಧ ಮಾಡಿದ್ದನ್ನು, ಹೇಳಿದನ್ನು ನಾನು ಕೇಳಲಿಲ್ಲ. ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇ ರಾಜೀವ ಗಾಂಧಿ. ಹೀಗಿರುವಾಗ ಶ್ರೀ ರಾಮ ಮಂದಿರದ ಉದ್ಘಾಟನೆ ಎಲ್ಲರ ಕಾರ್ಯಕ್ರಮ ಆಗಬೇಕೇ ವಿನಃ ಒಂದು ವ್ಯಕ್ತಿಯದು, ಸಂಘಟನೆಯದ್ದು, ಪಕ್ಷದ್ದು ಆಗಬಾರದು ಎಂದರು.ಹೇಳಿಕೆ ಜವಾಬ್ದಾರಿಯಿಂದ ನೀಡಲಿ: ಮುಖ್ಯಮಂತ್ರಿ ಬಗ್ಗೆ ಉತ್ತರ ಕನ್ನಡ ಸಂಸದರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರ್ಯಾರೂ ಏನೇನೊ ಹೇಳುತ್ತಾರೆ, ಅದಕ್ಕೆ ಪ್ರತಿಯೊಬ್ಬರಿಗೂ ಉತ್ತರ ಕೊಡುವುದಿಲ್ಲ. ಉತ್ತರ ಕನ್ನಡ ಲೋಕಸಭಾ ಸದಸ್ಯರು ಜವಾಬ್ದಾರಿಯಿಂದ ಹೇಳಿಕೆ ಕೊಡಬೇಕು ಎಂದರು.
ಸಿದ್ದರಾಮಯ್ಯ ಅವರು ರಾಜ್ಯ ಮುಖ್ಯಮಂತ್ರಿಯಾಗಿದ್ದಾರೆ, ಮುಖ್ಯಮಂತ್ರಿ ಸ್ಥಾನಕ್ಕೂ ಗೌರವ ಸಿಗಬೇಕು, ಸಿದ್ದರಾಮಯ್ಯ ಅವರು ಅಯೋಧ್ಯಾ ಮಂದಿರ ಉದ್ಘಾಟನೆಯಾದ ಆನಂತರ ಹೋಗಿ ಬರುವುದಾಗಿ ನೀಡಿದ ಹೇಳಿಕೆ ಕೇಳಿದ್ದೇನೆ ಎಂದರು.ನನ್ನ ಹೆಸರು ಪ್ರಸ್ತಾಪ: ಲೋಕಸಭಾ ಚುನಾವಣೆಯ ಸಮಯದಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ನನ್ನ ಹೆಸರು ಪ್ರತಿ ಬಾರಿ ಚರ್ಚೆಗೆ ಬರುತ್ತದೆ. ಅದನ್ನು ನಿಲ್ಲಿಸಲು ಆಗುವುದಿಲ್ಲ. ನಮ್ಮ ಪಕ್ಷದಿಂದ ಇನ್ನೂ ಲೋಕಸಭಾ ಸ್ಪರ್ಧೆಗೆ ಅಭ್ಯರ್ಥಿಯ ಆಯ್ಕೆ ಲಿಸ್ಟ್ ಅಂತಿಮಗೊಂಡಿಲ್ಲ, ಲೋಕಸಭಾ ಚುನಾವಣೆಯು ಬಹುಬೇಗನೆ ನಡೆಯುವುದೆಂಬ ನಿರೀಕ್ಷೆ ನಮಗಿದೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆ ತಡವಾಗಿ ಕೊನೆಗಳಿಗೆಯಲ್ಲಿ ಆಗಬಾರದು, ಬೇಗನೆ ಘೋಷಣೆ ಮಾಡಿದರೆ ಪಕ್ಷಕ್ಕೂ ಮತ್ತು ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದರು.
ಆಡಳಿತ ಸರಳ ಪಾರದರ್ಶಕವಾಗಲಿ: ಆಡಳಿತವು ಕೇವಲ ರಾಜಕೀಯ ಜನ ಅಷ್ಟೇ ಅಲ್ಲ, ಪ್ರತಿಯೊಬ್ಬ ಜನಸಾಮಾನ್ಯರ ದಿನ ನಿತ್ಯದ ಜೀವನದಲ್ಲಿ ಪ್ರಭಾವ ಪರಿಣಾಮ ಬೀರುತ್ತದೆ. ಹಾಗಾಗಿ ಆಡಳಿತವು ಪಾರದರ್ಶಕವಾಗಿ ಇರಬೇಕು ಮತ್ತು ಜನಸಾಮಾನ್ಯರಿಗೆ ಆಡಳಿತ ಪದ್ಧತಿ ತಿಳಿದುಕೊಳ್ಳುವಷ್ಟು ಪಾರದರ್ಶಕವಾಗಿರಬೇಕು. ಆಡಳಿತದಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಮಾಡಲು ಸಾಧ್ಯ ಎಂಬುದವರ ಬಗ್ಗೆ ಎಲ್ಲರೊಂದಿಗೆ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ನೀಡಲಿದ್ದೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಅಜರ್ ಬಸರಿಕಟ್ಟಿ, ರವಿ ತೋರಣಗಟ್ಟಿ ಹಾಗೂ ಇತರರು ಇದ್ದರು.