ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಹೊಸನಗರಬಿಜೆಪಿ ಶುದ್ದೀಕರಣಕ್ಕಾಗಿ ನನ್ನದು ರಾಜಕೀಯ ಬಲಿದಾನ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಗಳಿಸಲು ಲಕ್ಷಾಂತರ ಮಂದಿ ಜೀವ ಕಳೆದುಕೊಂಡರು. ಆಸ್ತಿ, ಕುಟುಂಬ ಎಲ್ಲವನ್ನೂ ಕಳೆದುಕೊಂಡರು. ದೇಶಕ್ಕಾಗಿ ಬಲಿದಾನ ಮಾಡಿದರು. ಹಾಗೆಯೇ ನಾನು ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗುವ ಮೂಲಕ ರಾಜಕೀಯ ಬಲಿದಾನ ಮಾಡಿಕೊಳ್ಳುತ್ತಿದ್ದೇನೆ ಎಂದರು.ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡ ಬಳಿಕ ಅನೇಕರು ನಿಮ್ಮ ಮಗನ ಭವಿಷ್ಯ ಮತ್ತು ನಿಮ್ಮ ಭವಿಷ್ಯ ಹಾಳಾಗುವುದಿಲ್ಲವೇ? ಎಂದು ಕೇಳಿದ್ದರು. ನನ್ನ ಮಗನ ಬಳಿ ಕೇಳಿಯೇ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಮಗನ ರಾಜಕೀಯ ಜೀವನ ಹಾಳಾಗಬಹುದು. ನನಗೆ ನನ್ನ ಭವಿಷ್ಯದ ಬಗ್ಗೆ ಕಾಳಜಿ ಬೇಕಾಗಿಲ್ಲ. ಬಿಜೆಪಿ ಪಕ್ಷ ಶುದ್ಧೀಕರಣ ನಡೆಯಬೇಕು. ಇದಕ್ಕಾಗಿ ನಾನು ನನ್ನ ರಾಜಕೀಯ ಜೀವನವನ್ನು ಬಲಿದಾನ ಮಾಡುತ್ತಿದ್ದೇನೆ ಎಂದು ಹೇಳಿದರು.ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ ಹಾಕಿಸಿಕೊಳ್ಳಲಾಗಿದೆ. ಇಂತಹ ಹೊಂದಾಣಿಕೆಯನ್ನು ಕಾಂಗ್ರೆಸ್‌ನ ಅನೇಕ ನಾಯಕರು ಮತ್ತು ಕಾರ್ಯಕರ್ತರು ಗುರುತಿಸಿದ್ದು, ಇದೇ ಕಾರಣಕ್ಕೆ ಬೇಸರಗೊಂಡು ತಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೆಲವರು ಧೈರ್ಯವಾಗಿ ಜೊತೆಗೆ ಬಂದಿದ್ದರೆ, ಇನ್ನೂ ಕೆಲವರು ಅನಿವಾರ್ಯವಾಗಿ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.ಬಿಜೆಪಿ ಇತಿಹಾಸದಲ್ಲಿ ಒಳ ಒಪ್ಪಂದ ಎಂಬುದು ಇರಲೇ ಇಲ್ಲ. ಸೋಲು ಗೆಲುವು ಏನೇ ಇದ್ದರೂ ನೇರಾನೇರ ಚುನಾವಣೆ ನಡೆಸುತ್ತಿದ್ದೆವು. ಹಿಂದುತ್ವ, ರೈತ ಸಮುದಾಯ, ತುಳಿತಕ್ಕೆ ಒಳಗಾದ ಧಮನಿತರ ಪರವಾಗಿ ಹೋರಾಟ ನಡೆಸಿಕೊಂಡು ಬಂದು ಪಕ್ಷ ಕಟ್ಟಿದೆವು. ಯಡಿಯೂರರಪ್ಪ, ತಾವು, ಅನಂತಕುಮಾರ್ ಸೇರಿದಂತೆ ಹಲವಾರು ಮುಖಂಡರು 40 ವರ್ಷಗಳ ಕಾಲ ತಪಸ್ಸಿನಿಂತೆ ಪಕ್ಷ ಕಟ್ಟಿದ್ದರಿಂದ ಇಂದು ಅಧಿಕಾರಕ್ಕೆ ಏರುವಂತಾಗಿದೆ ಎಂದು ಹೇಳಿದರು.ಕೆಲವರಿಗೆ ಸತ್ಯ ಹೇಳಿದರೆ ಸಿಟ್ಟು ಬರುತ್ತದೆ. ನಾನು ಸ್ಪರ್ಧೆಯ ಮೂಲಕ ಪಕ್ಷದ ವರಿಷ್ಟರಿಗೆ ವಿಷಯ ಮನದಟ್ಟು ಮಾಡಿಕೊಡಲು ಯತ್ನಿಸುತ್ತಿದ್ದೇನೆ. ನಾನು ಆರಂಭದಲ್ಲಿ ಈ ಕಾರಣಕ್ಕಾಗಿ ಸ್ಪರ್ಧೆ ಮಾಡಿದೆ. ಆದರೆ ಬಳಿಕ ಜನರಿಂದ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದ್ದು, ಗೆಲ್ಲವು ಎಲ್ಲ ಸಾಧ್ಯತೆಗಳು ತೆರೆದುಕೊಂಡಿವೆ. ಸ್ವತಃ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಕರೆ ಮಾಡಿ, ಇಲ್ಲವೇ ಖುದ್ದಾಗಿ ಭೇಟಿ ಮಾಡಿ ಬೆಂಬಲದ ಭರವಸೆ ನೀಡುತ್ತಿದ್ದು, ಇನ್ನೊಂದಿಷ್ಟು ಪ್ರಯತ್ನ ಮುಂದುವರೆಸಿ ಶೇ.100 ರಷ್ಟು ಗೆಲ್ಲುತ್ತೀರಿ ಎಂದು ಹೇಳುತ್ತಿದ್ದಾರೆ. ಅಂತಹದೇ ವಾತಾವರಣ ಜಿಲ್ಲೆಯಾದ್ಯಂತ ಇದೆ. ಈ ಕ್ಷಣದಲ್ಲಿ ಚುನಾವಣೆ ನಡೆದರೆ ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಈಶ್ವರಪ್ಪ ಹೇಳಿದರು.ಗೋಷ್ಟಿಯಲ್ಲಿ ಮಾಜಿ ಮೇಯರ್ ಸುವರ್ಣ ಶಂಕರ್, ಮಾಜಿ ಉಪ ಮೇಯರ್ ಶಂಕರ್ ಗನ್ನಿ ಮತ್ತು ಏಳುಮಲೈ, ಮಾಜಿ ಸದಸ್ಯ ವಿಶ್ವಾಸ್, ಮಹಾಲಿಂಗ ಶಾಸ್ತ್ರಿ ಮತ್ತಿತರರು ಇದ್ದರು.ಬಿಎಸ್‌ವೈ ಕಾರ್ಯಕರ್ತರಿಗಾಗಿ ಉತ್ತರ ನೀಡಬೇಕು
ನಾನು ಕೇಳುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ಇದು ಸರಿಯಲ್ಲ. ನನ್ನ ಪ್ರಶ್ನೆಗೆ ಉತ್ತರ ಬೇಕಾಗಿದೆ. ಕೇವಲ ನನಗಲ್ಲ, ಲಕ್ಷಾಂತರ ಕಾರ್ಯಕರ್ತರು ಕೂಡ ಈ ಪ್ರಶ್ನೆಗೆ ಉತ್ತರ ಬಯಸಿದ್ದಾರೆ ಎಂದರು.ನಾನು ಯಾವ ಆರೋಪಗಳನ್ನು ಮಾಡುತ್ತಿದ್ದೇನೆಯೋ ಅಂತಹ ಆರೋಪಗಳ ಕಾರಣದಿಂದಲೇ ಬಿಜೆಪಿ 108 ಸ್ಥಾನಗಳಿಂದ 68 ಸ್ಥಾನಗಳಿಗೆ ಕುಸಿದಿದೆ. ಕಾರ್ಯ ಕರ್ತರಲ್ಲಿ ಇಂತಹ ಕಾರಣಕ್ಕೆ ನೋವಿದೆ. ಆದರೆ ಯಾರಲ್ಲಿಯೂ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಇನ್ನು ಬಹಿರಂಗವಾಗಿ ಹೇಳುವ ಪ್ರಶ್ನೆಯೇ ಇಲ್ಲ. ಇಂತಹ ಸನ್ನಿವೇಶದಲ್ಲಿ ನಾನು ಧೈರ್ಯ ಮಾಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗುವ ಮೂಲಕ ಇಂತಹ ಎಲ್ಲ ಅಪಸವ್ಯಗಳಿಗೆ ಮುಕ್ತಿ ಹಾಡಿ ಪಕ್ಷವನ್ನು ಶುದ್ಧೀಕರಣ ಮಾಡುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.ಲೋಕಸಭೆಯಲ್ಲಿ ಹಿಂದುತ್ವದ ಪ್ರತಿನಿಧಿಯಾಗಿಯಾಗಿರುವೆ: ಈಶ್ವರಪ್ಪ
ಹೊಸನಗರ: ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದ ಹಿಂದುತ್ವವಾದಿ ಕಾರ್ಯಕರ್ತರು ನನ್ನ ಚುನಾವಣಾ ಪ್ರಚಾರ ಕಾರ್ಯಕ್ಕೆ ಜೊತೆಯಾಗಿದ್ದಾರೆ. ನನ್ನ ಗೆಲುವನ್ನು ತಡೆಯಲು ಯಾವ ರಾಜಕೀಯ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಹೊಸನಗರದಲ್ಲಿ ಬುಧವಾರ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಒಂದು ಕುಟುಂಬ ಅತಿರೇಕದ ವರ್ತನೆಯಿಂದ ಅನೇಕ ನಾಯಕರ ಮನಸ್ಸಿಗೆ ನೋವಾಗಿದೆ. ಪಕ್ಷದ ಕಾರ್ಯಕರ್ತರು ನಲುಗಿ ಹೋಗಿದ್ದಾರೆ. ಹೀಗಾಗಿ ಪಕ್ಷದ ಶುದ್ಧೀಕರಣದೊಂದಿಗೆ ಪುನಶ್ಚೇತನ ಬಯಸುತ್ತಿದ್ದಾರೆ. ಇವರ ಪ್ರತಿನಿಧಿಯಾಗಿ ನಾನು ಚುನಾವಣೆಯಲ್ಲಿ ಸ್ವರ್ಧಿಸುತ್ತಿದ್ದೇನೆ ಎಂದರು.ನಾನು ರಾಜ್ಯದಲ್ಲಿ ಹಿಂದುತ್ವದ ಪರವಾಗಿ ಹೋರಾಟ ಮಾಡುತ್ತಿರುವವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನನಗಿಂತ ದೊಡ್ಡ ಹಿಂದುತ್ವವಾದಿ ಹೋರಾಟ ಗಾರರೂ ಇದ್ದಾರೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಅನಂತ ಕುಮಾರ್ ಹೆಗ್ಡೆ ಇವರೆಲ್ಲಾ ಹಿಂದುತ್ವ ಪರವಾದ ಹೋರಾಟ ಗಾರರು. ಇವರೆಲ್ಲರ ಮನಸ್ಸಿಗೆ ನೋವಾಗಿದೆ. ಪಕ್ಷದ ಪುನಶ್ಚೇತನ ಬಯಸುತ್ತಿದ್ದಾರೆ. ಇವರ ಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತಾಡಿ, ಕಳೆದ ನಲವತ್ತು ವರ್ಷಗಳಿಂದ ಶ್ರಮವಹಿಸಿ ದುಡಿದು ಪಕ್ಷ ಕಟ್ಟಿದ ವ್ಯಕ್ತಿಯನ್ನು ಏಕಾಏಕಿ ಹಿನ್ನೆಲೆಗೆ ಸರಿಸಿದ್ದು, ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಮಾಡಿದ ಅವಮಾನ. ಅದಕ್ಕಾಗಿ ನಾನೇ ಸ್ವಯಂ ಈಶ್ವರಪ್ಪನವರಿಗೆ ಬೆಂಬಲ ಸೂಚಿಸಿ, ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಅವರಿಗೆ ನೀವೆಲ್ಲ ಆಶೀರ್ವಾದ ಮಾಡಿ ಬೆಂಬಲ ಸೂಚಿಸಿ ಅವರ ಗೆಲುವಿಗೆ ಕಾರಣರಾಗಬೇಕು ಎಂದು ಕರೆ ನೀಡಿದರು.ಬಳಿಕ ಹೊಸನಗರದ ಈಡಿಗರ ಸಭಾ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೊಸನಗರದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮದಿಂದ ಈಶ್ವರಪ್ಪನವರ ಅಭಿಮಾನಿಗಳು ಮಹಿಳೆಯರು ಆಗಮಿಸಿದ್ದರು. ಸಭೆಯಲ್ಲಿ ನಳಿನಿರಾವ್, ವಡಸೊಳ್ಳಿ ಕುಮಾರಸ್ವಾಮಿ ಅದರಂತೆ ಸತೀಶ್, ತಾ ಮ ನರಸಿಂಹ, ಕುಂಬ್ಲೆ ಅಶೋಕ್, ನಿರೂಪ್, ವಾಟಗೋಡ್ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.