ಸಾರಾಂಶ
ರಾಜಕೀಯ ಕುಸ್ತಿಗಳನ್ನು ಹೇಗೆ ಗೆಲ್ಲಬೇಕು, ಎದುರಾಳಿಗಳನ್ನು ಹೇಗೆ ಸೋಲಿಸಬೇಕೆಂಬ ಎಲ್ಲ ಡಾವ್ ಪೇಚುಗಳನ್ನು ಬಲ್ಲೆ.
ಹಳಿಯಾಳ: ನಾನು ಕುಸ್ತಿಯನ್ನು ಚೆನ್ನಾಗಿ ಬಲ್ಲೆ, ರಾಜಕೀಯದ ಚುನಾವಣಾ ಅಖಾಡದಲ್ಲಿ ನಾನು ಸಹ ನುರಿತ ಪೈಲ್ವಾನ. ರಾಜಕೀಯ ಕುಸ್ತಿಗಳನ್ನು ಹೇಗೆ ಗೆಲ್ಲಬೇಕು, ಎದುರಾಳಿಗಳನ್ನು ಹೇಗೆ ಸೋಲಿಸಬೇಕೆಂಬ ಎಲ್ಲ ಡಾವ್ ಪೇಚುಗಳನ್ನು ಬಲ್ಲೆ. ಆದರೆ ಇವೆಲ್ಲವುಗಳಿಗಿಂತ ನನ್ನ ಕ್ಷೇತ್ರದ ಮತದಾರರ ಹಾಗೂ ಹಿತೈಷಿಗಳ ಆಶೀರ್ವಾದ, ಸಹಕಾರವೇ ನನ್ನ ಗೆಲುವಿನ ಮಂತ್ರವಾಗಿದೆ; ಶ್ರೀರಕ್ಷೆಯಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಶುಕ್ರವಾರ ಪಟ್ಟಣದ ಜಿಲ್ಲಾಕುಸ್ತಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಬೆಳಗಾವಿ ವಿಭಾಗೀಯ ಮಟ್ಟದ 2025-26ನೇ ಸಾಲಿನ (ಪುರುಷರು ಹಾಗೂ ಮಹಿಳೆಯರ ಖೋ-ಖೋ ಮತ್ತು ಕುಸ್ತಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಕುಸ್ತಿ ಅಭಿವೃದ್ಧಿಗೆ ಆದ್ಯತೆ:
ಕುಸ್ತಿ ಮತ್ತು ಖೋ-ಖೋ ಇವು ಗ್ರಾಮೀಣ ಕ್ರೀಡೆಗಳು, ಉತ್ತಮ ಆರೋಗ್ಯ, ಮಾನಸಿಕ ಸದೃಡತೆಯನ್ನು ಈ ಕ್ರೀಡೆಗಳು ಹೆಚ್ಚಿಸುತ್ತವೆ. ಹಳಿಯಾಳ ತಾಲೂಕ ಕುಸ್ತಿಗೆ ಪ್ರಸಿದ್ಧವಾಗಿದೆ, ಐದು ದಶಕಗಳ ಹಿಂದೆಯೇ ಹೆಮ್ಮೆಯ ಕುಸ್ತಿಪಟು ದಿ.ಅಗ್ನೆಲ್ ಹಳಿಯಾಳದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದರು. ಹಳಿಯಾಳದಲ್ಲಿ ಕುಸ್ತಿ ಬೆಳೆಯಬೇಕು, ಕುಸ್ತಿ ಪಟುಗಳ ಸಂಖ್ಯೆಯು ಬೆಳೆಯಬೇಕೆಂಬ ಸದುದ್ದೇಶದಿಂದ ಹಳಿಯಾಳದಲ್ಲಿ ಕುಸ್ತಿಗೆ ಪ್ರಥಮ ಪ್ರಾಶಸ್ತ್ಯ ನೀಡಿದೆ, ಕುಸ್ತಿ ಕ್ರೀಡಾಂಗಣ ಪ್ರಾರಂಭಿಸಿದೆ, ಪ್ರತಿ ವರ್ಷವೂ ಹಳಿಯಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸುವ ಮೂಲಕ ನಮ್ಮ ಕುಸ್ತಿ ಪಟುಗಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟೆ ಎಂದರು.ಹಳಿಯಾಳದ ಕುಸ್ತಿ ಕ್ರೀಡಾಂಗಣದ ಹೆಚ್ಚುವರಿ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ, ಹಳಿಯಾಳದಲ್ಲಿ ಕುಸ್ತಿ ಕ್ರೀಡೆಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದೆನೆ ಎಂದರು.
ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿ ವಿಭಾಗೀಯ ಮಟ್ಟದ ಈ ದಸರಾ ಸ್ಪರ್ಧೆಯಲ್ಲಿ ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸದ್ದಾರೆ ಎಂದರು.ಜಿಲ್ಲಾ ಕುಸ್ತಿ ಕ್ರೀಡಾಂಗಣದಲ್ಲಿ ಕುಸ್ತಿ ಸ್ಪರ್ಧೆ ಹಾಗೂ ತಾಲೂಕ ಕ್ರೀಡಾಂಗಣದಲ್ಲಿ ಖೋ-ಖೋ ಸ್ಪರ್ಧೆಗಳು ನಡೆಯಲಿವೆ ಎಂದರು.
ಜಿಲ್ಲಾ ಕುಸ್ತಿ ಅಸೋಶಿಯೇಷನ್ ಕಾರ್ಯದರ್ಶಿ ಯಶ್ವಂತ ಆನಂದ ಸ್ವಾಮಿ, ತಾಲೂಕು ಕುಸ್ತಿ ಅಸೋಶಿಯೇಷನ್ ಅಧ್ಯಕ್ಷ ನಾಗೇಂದರ ಗೌಡಕ್ಕನವರ, ಗದಗ ಜಿಲ್ಲಾ ಕುಸ್ತಿ ಅಸೋಶಿಯೇಷನ್ ಅಧ್ಯಕ್ಷ ವಸಂತ ಸಿದ್ದಮನಳ್ಳಿ, ಕುಸ್ತಿ ಪಟು ವೆಂಕಟೇಶ್ ಪಾಟೀಲ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮಿ ವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಉಮೇಶ ಬೊಳಶೆಟ್ಟಿ, ತಹಸೀಲ್ದಾರ ಇದ್ದರು. ಹಳಿಯಾಳ ತಾಲೂಕು ಕುಸ್ತಿ ತರಬೇತುದಾರ ತುಕಾರಾಮ ಗೌಡ ಕಾರ್ಯಕ್ರಮ ನಿರ್ವಹಿಸಿದರು.