ಸಾರಾಂಶ
ಬಿಜೆಪಿ ಶಿಸ್ತಿನ ಸಿಪಾಯಿಯಾಗಿರುವ ತಾವು ಈ ಬಾರಿಯ ಲೋಕಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಬಿಜೆಪಿ ಶಿಸ್ತಿನ ಸಿಪಾಯಿಯಾಗಿರುವ ತಾವು ಈ ಬಾರಿಯ ಲೋಕಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಇಲ್ಲವೇ ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ತಮಗೆ ಸಿಗುವ ವಿಶ್ವಾಸವಿದೆ ಎಂದರು.
2019ರ ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ವಂಚಿತನಾಗಿದ್ದೇನೆ. ಆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದ ವರಿಷ್ಠರು ತಮಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಕತ್ತಿ ಕುಟುಂಬದ ಪಾತ್ರ ಅನನ್ಯವಾಗಿದೆ. ಹಾಗಾಗಿ ಸದ್ಯ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಅಥವಾ ಬೆಳಗಾವಿ ಕ್ಷೇತ್ರದಿಂದ ತಮ್ಮನ್ನು ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.ದೇಶಕ್ಕೆ ಪ್ರಧಾನಿ ಮೋದಿ ಅಗತ್ಯವಿದ್ದು ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ತಾವು ಕಾಂಗ್ರೆಸ್ ಸೇರುವುದಾಗಿ ವಿರೋಧಿಗಳು ವದಂತಿ, ಸುಳ್ಳು ಸುದ್ಧಿ ಹರಡಿಸುತ್ತಿರುವುದು ಪೂರ್ವನಿಯೋಜಿತ ಕೃತ್ಯ. ಬಿಜೆಪಿ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ತಾವು ಸದಾ ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗಾಗಿ ಮಾ.5 ರಂದು ಬೆಳಗ್ಗೆ 10 ಕ್ಕೆ ಚಿಕ್ಕೋಡಿಯಲ್ಲಿ ಬೂತ್‌ಮಟ್ಟದ ಅಧ್ಯಕ್ಷರು ಸೇರಿದಂತೆ ವಿವಿಧ ಘಟಕಗಳ ಮುಂಚೂಣಿ ಪದಾಧಿಕಾರಿಗಳ ಸಮಾವೇಶ ಏರ್ಪಡಿಸಲಾಗಿದೆ. ಈ ಸಮಾವೇಶದಲ್ಲಿ ವಿಕಸಿತ ಭಾರತದ ಯೋಜನೆಗಳ ಸಂವಾದ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಭಾಗವಹಿಸುವರು. ಬಳಿಕ ಬೆಳಗಾವಿಯಲ್ಲಿ ಮಧ್ಯಾಹ್ನ 1.30ಕ್ಕೆ ಕೋರ್ ಕಮಿಟಿ ಸಭೆ, ಸಂಜೆ 4 ಕ್ಕೆ ಬುದ್ಧಿಜೀವಿಗಳ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.ಮುಖಂಡರಾದ ಬಿಜೆಪಿ ಬ್ಲಾಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ ಮತ್ತಿತರರು ಉಪಸ್ಥಿತರಿದ್ದರು.