ಶ್ರೀಅಮ್ಮಾಜೇಶ್ವರಿ ಯೋಜನೆ 24 ತಿಂಗಳಲ್ಲಿ ಪೂರ್ಣ

| Published : Mar 05 2024, 01:33 AM IST

ಸಾರಾಂಶ

ತಾಲೂಕಿನ ಪೂರ್ವ ಭಾಗದ 12 ಹಳ್ಳಿಗಳ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಗೆ ಬಜೆಟ್ ಪೂರ್ವದಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ಇಲಾಖೆಯಿಂದ ಮಂಜೂರಾತಿ ಪಡೆದುಕೊಳ್ಳಲಾಗಿದೆ. ₹1486 ಕೋಟಿ ಅನುದಾನ ಮೀಸಲಿಟ್ಟ ಈ ಯೋಜನೆಯನ್ನು ಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಮೂಲಕ ಈ ಭಾಗದ ಸುಮಾರು 70 ಸಾವಿರ ಎಕರೆ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಪೂರ್ವ ಭಾಗದ 12 ಹಳ್ಳಿಗಳ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಗೆ ಬಜೆಟ್ ಪೂರ್ವದಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ಇಲಾಖೆಯಿಂದ ಮಂಜೂರಾತಿ ಪಡೆದುಕೊಳ್ಳಲಾಗಿದೆ. ₹1486 ಕೋಟಿ ಅನುದಾನ ಮೀಸಲಿಟ್ಟ ಈ ಯೋಜನೆಯನ್ನು ಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಮೂಲಕ ಈ ಭಾಗದ ಸುಮಾರು 70 ಸಾವಿರ ಎಕರೆ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಸೋಮವಾರ ಕೊಟ್ಟಲಗಿ ಗ್ರಾಮದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆಯ ಸಮಾರಂಭದ ಸಿದ್ಧತೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ರೈತನ ಮಗನಾಗಿ ನಮ್ಮ ಮತ ಕ್ಷೇತ್ರದ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನ ನೀಡಬೇಕೆಂಬುದು ನನ್ನ ಬಹುದಿನಗಳ ಕನಸು. ಪೂರ್ವ ಭಾಗದ ಅನೇಕ ಹಳ್ಳಿಗಳಿಗೆ ಕಕಮರಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ ನಂತರ ಆ ಯೋಜನೆಯಿಂದ ವಂಚಿತವಾದ ಕೆಲವು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ದೊರಕಿರಲಿಲ್ಲ. ಕೊನೆಯ ಹಳ್ಳಿಯ ರೈತರಿಗೂ ಈಗ ನೀರಾವರಿ ಸೌಲಭ್ಯ ಒದಗಿಸುವ ಯೋಗ ಕೂಡಿ ಬಂದಿದೆ. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಬರುವ 24 ತಿಂಗಳಲ್ಲಿ ಪೂರ್ಣಗೊಳ್ಳುವುದರಿಂದ ಅಥಣಿ ಮತಕ್ಷೇತ್ರದಲ್ಲಿ ಶೇ.95 ರಷ್ಟು ಕೃಷಿ ಭೂಮಿ ನೀರಾವರಿ ಸೌಲಭ್ಯ ಹೊಂದಲಿದೆ ಎಂದು ಹೇಳಿದರು.

6 ರಂದು ಸಿಎಂ, ಡಿಸಿಎಂ ಆಗಮನ:

ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲು ಮಾ.6 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೊಟ್ಟಲಗಿ ಗ್ರಾಮಕ್ಕೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಬೃಹತ್ ಕೈಗಾರಿಕೆ ಸಚಿವ ಎಮ್.ಬಿ.ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಬೆಳಗಾವಿ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಶಾಸಕರಿಗೆ ಮತ್ತು ಸಂಸದರಿಗೆ ಆಹ್ವಾನಿಸಲಾಗಿದೆ. ಇದಲ್ಲದೇ ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಜತ್ ಮತಕ್ಷೇತ್ರಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ವಿಘ್ನಗಳ ನಿವಾರಣೆಗೆ ವಿಘ್ನೇಶ್ವರ ಪೂಜೆ:ಈ ಭಾಗದ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದಿಂದ ಸಾವಿರಾರು ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಘ್ನಗಳು, ಪಿಶಾಚಿಗಳ ತೊಂದರೆಯಾಗದಂತೆ ಈ ಭಾಗದ 11 ರೈತರ ಸಮ್ಮುಖದಲ್ಲಿ ವಿಘ್ನೇಶ್ವರನ ಪೂಜೆ ಮತ್ತು ಹೋಮ, ಹವನ ಮಾಡುವ ಮೂಲಕ ಧಾರ್ಮಿಕ ವಿಧಿ ವತ್ತಾಗಿ ಭೂಮಿ ಪೂಜೆ ಕೂಡ ನೆರವೇರಿಸಲಾಗುವುದು ಎಂದರು.

ರೈತರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ:

ನಮ್ಮ ರೈತರ ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಅವಶ್ಯವಿರುವಲ್ಲಿ ಸರ್ಕಾರಿ ಪ್ರೌಢಶಾಲೆಗಳನ್ನು, ಪದವಿಪೂರ್ವ ಮಹಾವಿದ್ಯಾಲಯಗಳನ್ನು, ಪದವಿ ಮಹಾವಿದ್ಯಾಲಯಗಳನ್ನು, ಐಟಿಐ, ಡಿಪ್ಲೋಮಾ, ಕೇಂದ್ರೀಯ ವಿದ್ಯಾಲಯ ಮತ್ತು ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗಬೇಕಾದ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆ ಮಾಡಿ ಇತ್ತೀಚಿಗೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಅನಿಸುತ್ತದೆ. ಶೀಘ್ರದಲ್ಲಿಯೇ ಕೇಂದ್ರದ ಒಪ್ಪಿಗೆ ಪಡೆದು ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಗುವುದು ಎಂದರು.ಈ ವೇಳೆ ಮುಖಂಡರಾದ ವಿಶ್ವನಾಥ ಗಣಿ, ಶಿವಾನಂದ ಗುಡ್ಡಾಪುರ, ಸಿದ್ದರಾಯ ಯಲ್ಲಡಗಿ, ರಾಮನಗೌಡ ಪಾಟೀಲ, ಸುರೇಶ್ ಮಾಯಣ್ಣನವರ, ಶಾಂತಿನಾಥ ನಂದೀಶ್ವರ, ಶಿವರುದ್ರ ಗೂಳಪ್ಪನವರ, ಮಲ್ಲು ಡಂಗಿ, ಶ್ರೀಶೈಲ ನಾಯಿಕ, ಅಭಿಯಂತರು ಪ್ರವೀಣ್ ಹುಣಸಿಕಟ್ಟಿ, ವೀರಣ್ಣ ವಾಲಿ, ಡಿವೈಎಸ್ಪಿ ಶ್ರೀಪಾದ್ ಜಲ್ದಿ, ಸಿಪಿಐ ರವೀಂದ್ರ ನಾಯ್ಕೋಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

---

ಮತ್ತೆ ಬಿಜೆಪಿಗೆ ಹೋಗುವ ಅಗತ್ಯವಿಲ್ಲ:

ಮಾಜಿ ಸಿಎಂ ಜಗದೀಶ ಶೆಟ್ಟರ ಕಾಂಗ್ರೆಸ್ ಪಕ್ಷ ತೊರೆದು ಮತ್ತೆ ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಅವರು ಕೂಡಾ ಅವರ ಹಾದಿಯಲ್ಲಿ ನಡೆಯುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗಿದೆ. ನಾನು ಮತ್ತೆ ಬಿಜೆಪಿಗೆ ಹೋಗುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ ಅವರು ಅಥಣಿ ಮತ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಕೇಳಿದಂತೆ ಅಭಿವೃದ್ಧಿ ಅನುದಾನ ಒದಗಿಸುತ್ತಿದ್ದಾರೆ. ಮತಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಮತದಾರರ ಋಣ ತೀರಿಸಲು ಶ್ರಮಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

--

ಕೃಷ್ಣಾ ನದಿ ನೀರು ಹಂಚಿಕೆ ವಿಚಾರ

ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ

ನೆರೆಯ ಮಹಾರಾಷ್ಟ್ರ ಸರ್ಕಾರ ಬೇಸಿಗೆ ಸಂದರ್ಭದಲ್ಲಿ ತಾಲೂಕಿನ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ 4 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಬೇಕು. ಇನ್ನು ಆಲಮಟ್ಟಿ ಹಿನ್ನೀರಿನ ನೀರನ್ನು ನೆರೆಯ ಮಹಾರಾಷ್ಟ್ರದ ಜತ್ ಮತ್ತು ಸೊಲ್ಲಾಪುರ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ಟಿಎಂಸಿ ನೀರು ಕೊಡುವ ವಿಚಾರವಾಗಿ ಎರಡು ಸರ್ಕಾರಗಳ ಮಧ್ಯೆ ಒಡಂಬಡಿಕೆ ಆಗಬೇಕು ಎಂಬ ಚಿಂತನೆ ಬಹು ದಿನಗಳಿಂದ ನಡೆಯುತ್ತಿದೆ. ಹಿಂದೆ ಈ ಬಗ್ಗೆ ಮಾತುಕತೆಗಳಾಗಿವೆ. ಆದರೆ ಯಾವುದೇ ಅಧಿಕೃತವಾಗಿ ಒಡಂಬಡಿಕೆ ಆಗಿಲ್ಲ. ಈ ಒಡಂಬಡಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಮನವರಿಕೆ ಮಾಡಲು ನೆರೆಯ ಸಾಂಗ್ಲಿ ಮತ್ತು ಜತ್ ಮತಕ್ಷೇತ್ರಗಳ ಜನಪ್ರತಿನಿಧಿಗಳನ್ನು ಈ ಕಾರ್ಯಕ್ರಮದಲ್ಲಿ ಆಹ್ವಾನಿಸಲಾಗಿದೆ. ಗಡಿ ಭಾಗದ ಕನ್ನಡಿಗರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಹಾರಾಷ್ಟ್ರದ ಶಾಸಕರ ಗಮನಕ್ಕೆ ತರಲಾಗುವುದು. ಈ ವಿಷಯ ಅವರ ವಿಧಾನಸಭೆಯಲ್ಲಿ ಚರ್ಚಿಸಲು ಅನುಕೂಲವಾಗಲಿದೆ. ಎರಡು ಸರ್ಕಾರಗಳ ಸಮನ್ವತೆಯಿಂದ ಗಡಿ ಭಾಗದ ಕನ್ನಡಿಗರ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಹೇಳಿದರು.