ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರದ ಅನುದಾನ ವಿತರಣೆಯಲ್ಲಿ ಆಡಳಿತ, ವಿಪಕ್ಷ ಶಾಸಕರಿಗೆ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ, ಮಾಂಬಹಳ್ಳಿ, ಸೋಮನಾಥಪುರ ಗ್ರಾಮಗಳಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಾನು ವಿರೋಧ ಪಕ್ಷದ ಶಾಸಕ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಗೆ ಕೇವಲ 25 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಅದೇ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಅನುದಾನ ನೀಡಲಾಗುತ್ತಿದೆ ಎಂದರು.
ಇದೂವರೆವಿಗೂ ತಾಲೂಕಿನ ಸುಮಾರು 330 ಗ್ರಾಮಗಳಿಗೆ ತಲಾ 10 ಲಕ್ಷ ರು.ಗಳಂತೆ ಅನುದಾನ ನೀಡಿದ್ದೇನೆ. ಇನ್ನು 70 ಗ್ರಾಮಗಳು ಉಳಿದಿವೆ. ಆ ಗ್ರಾಮಗಳಿಗೆ ತಲಾ 10 ಲಕ್ಷ ರು.ಗಳ ಅನುದಾನ ನೀಡುವ ಮೂಲಕ ಎಲ್ಲಾ ಗ್ರಾಮಗಳಿಗೂ ಸಾಮಾಜಿಕ ನ್ಯಾಯ ನೀಡಿದ ಧನ್ಯತಾ ಭಾವನೆ ನನ್ನದಾಗಲಿದೆ ಎಂದರು.ನಾನು ವಿರೋಧ ಪಕ್ಷದ ಶಾಸಕನಾಗಿದ್ದೇನೆ. 2028ಕ್ಕೆ ನಮ್ಮ ಎನ್‌ಡಿಎ ಮೈತ್ರಿ (ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೂಟ) ಪಕ್ಷವು ಅಧಿಕಾರಕ್ಕೆ ಬರುವುದು ನೂರಕ್ಕೆ 100 ರಷ್ಟು ಸತ್ಯವಾಗಿದೆ. ಆಗ ಕ್ಷೇತ್ರದ ಮತದಾರ ಬಂಧುಗಳು ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು. ನಾನು ಸಚಿವನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕನಿಷ್ಠ 3 ಸಾವಿರ ಕೋಟಿ ರು. ಗಳ ಅನುದಾನ ತಂದು ನಿಮ್ಮ ಋಣ ತೀರಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಂಬಳ್ಳಿ ಅಶೋಕ್, ಟಿಎಪಿಸಿಎಂಎಸ್ ಕಾಂತರಾಜು, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಕೆ.ಟಿ.ಚಂದ್ರೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಕೆ.ಟಿ.ರಾಮೇಗೌಡ, ಮಾಂಬಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಿರ್ದೇಶಕರಾದ ಕಟ್ಟೆಕ್ಯಾತನಹಳ್ಳಿ ತಿಮ್ಮೇಗೌಡ, ಕಾಂತರಾಜು, ನಿವೃತ್ತ ಪಶುವೈದ್ಯಾಧಿಕಾರಿ ಡಾ.ಬಸವರಾಜು, ತಾಲೂಕು ಅಲ್ಪಸಂಖ್ಯಾತರ ಜೆಡಿಎಸ್ ಅಧ್ಯಕ್ಷ ತನ್ವೀರ್ ಪಾಷಾ, ಅಧ್ಯಕ್ಷ ಸೋಮನಹಳ್ಳಿ ಗ್ರಾಪಂ ಪಿಡಿಒ ರಾಮೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಅರಳಕುಪ್ಪೆ ಪಾಂಡು, ನಿರ್ಮಿತಿ ಕೇಂದ್ರ ಸಂಸ್ಥೆ ಎಂಜಿನಿಯರ್ ಕುಮಾರ್ ಇತರರು ಉಪಸ್ಥಿತರಿದ್ದರು.