ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿರುವೆ

| Published : Mar 28 2024, 12:56 AM IST

ಸಾರಾಂಶ

ಕನಕಪುರ: ನಾನು ಮಾಡಿರುವ ಕೆಲಸಕ್ಕೆ ಜನರ ಬಳಿ ಕೂಲಿ ಕೇಳುತ್ತಿದ್ದು ಕ್ಷೇತ್ರದ ಮತದಾರರು ಮತ್ತೊಮ್ಮೆ ಅವರ ಸೇವೆ ಮಾಡಲು ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದು ಸಂಸದ ಡಿ. ಕೆ. ಸುರೇಶ್ ತಿಳಿಸಿದರು.

ಕನಕಪುರ: ನಾನು ಮಾಡಿರುವ ಕೆಲಸಕ್ಕೆ ಜನರ ಬಳಿ ಕೂಲಿ ಕೇಳುತ್ತಿದ್ದು ಕ್ಷೇತ್ರದ ಮತದಾರರು ಮತ್ತೊಮ್ಮೆ ಅವರ ಸೇವೆ ಮಾಡಲು ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದು ಸಂಸದ ಡಿ. ಕೆ. ಸುರೇಶ್ ತಿಳಿಸಿದರು.

ತಾಲೂಕಿನ ಪುರಾಣ ಪ್ರಸಿದ್ಧ ಕಲ್ಲಹಳ್ಳಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಜನ ನನಗೆ ಪ್ರೀತಿ ವಿಶ್ವಾಸ ತೋರಿಸಿ ಸಂಸದನಾಗಿ ಕ್ಷೇತ್ರದ ಹಾಗೂ ಕನ್ನಡ ನಾಡಿನ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಾನು ನಿರಂತರವಾಗಿ ಜನರ ಮಧ್ಯೆ ಇದ್ದು ಅವರ ಕಷ್ಟ -ಸುಖ ಗಳಲ್ಲಿ ಭಾಗಿಯಾಗಿ ಅವರ ಮನೆಯ ಮಗನಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಮ್ಮ ವಿರೋಧಿಗಳು ಡಿ.ಕೆ.ಶಿವಕುಮಾರ್ ಹಾಗೂ ನನ್ನ ಮೇಲೆ ಏನೇ ಅಪಪ್ರಚಾರ ಮಾಡಿದರೂ ಈ ಕ್ಷೇತ್ರದ ಜನತೆಗೆ ನಾವು ಏನು, ಯಾರು ನಮ್ಮ ಕಷ್ಟಕ್ಕೆ ಭಾಗಿಯಾಗುತ್ತಾರೆ ಎಂಬುದನ್ನು ಅರಿತಿದ್ದಾರೆ. ಈ ಬಾರಿಯೂ ನನಗೆ ಹೆಚ್ಚಿನ ಬಹುಮತದಿಂದ ಗೆಲವನ್ನು ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರ ಹಾಗು ಕಾರ್ಯಕರ್ತರ ಸಮ್ಮಿಲನ ಸಭೆ ವಿಚಾರವಾಗಿ ಮಾತನಾಡಿ, ಈಗಾಗಲೇ ಅ ಪಕ್ಷದ ನಾಯಕರ ನಡೆಯಿಂದ ಬೇಸತ್ತು ಬಿಜೆಪಿ-ಜೆಡಿಎಸ್ ಪಕ್ಷವನ್ನು ತೊರೆದು ಹಲವಾರು ಮುಖಂಡರು ಕಾಂಗ್ರೆಸ್ ಸೇರುತ್ತಿರುವುದರಿಂದ ನಮಗೆ ಇನ್ನೂ ಹೆಚ್ಚಿನ ಶಕ್ತಿ ಬಂದಾತಾಗಿದೆ. ಕಾಂಗ್ರೆಸ್ ಪಕ್ಷದ ಪರವಾಗಿ 8 ವಿಧಾನಸಭೆ ಕ್ಷೇತ್ರದಲ್ಲಿ ಮತದಾರರು ಬೆಂಬಲ ವ್ಯಕ್ತಪಡಿಸುತ್ತಿದ್ದು ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದು ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಹಾಗೂ ಅವರ ಸೇರ್ಪಡೆಯಿಂದ ಅವರ ಕುಟುಂಬದಲ್ಲಿ ವೈಮನಸ್ಸು ಉಂಟಾಗುವ ಸಂಭವ ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮಾ.28ರಂದು ಗುರುವಾರ ಬೆಳಗ್ಗೆ ರಾಮನಗರದ ಚುನಾವಣಾ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೂ ಆಹ್ವಾನ ನೀಡಿದ್ದು, ಅವರೆಲ್ಲರೂ ನನ್ನ ಬೆಂಬಲಕ್ಕೆ ಬರಲಿದ್ದಾರೆ. ಹಾಗೆಯೇ ಕ್ಷೇತ್ರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.

ನಂತರ ನಗರದ ಶ್ರೀ ಕ್ಷೇತ್ರ ದೇಗುಲಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಮರಳಿಗವಿ ಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿ ಆಶೀರ್ವಾದ ಪಡೆದು ತಮ್ಮ ತಾಯಿ ಗೌರಮ್ಮನವರ ಆಶೀರ್ವಾದ ಪಡೆದುಕೊಂಡರು. ತಾಲೂಕಿನ ಹಿರಿಯ ರಾಜಕಾರಣಿ ನಾರಾಯಣಗೌಡ ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಮನೆಗಳಿಗೆ ತೆರಳಿ ಆಶೀರ್ವಾದ ಪಡೆದರು. ಕೆ ಕೆ ಪಿ ಸುದ್ದಿ 02:ಕನಕಪುರದಲ್ಲಿ ಸಂಸದ ಡಿ.ಕೆ.ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.