ಬ್ಯಾಡಗಿ: ಅಗಲೀಕರಣ ಕಾರ್ಯಕ್ಕೆ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ತೆರವುಗೊಳಿಸಿದ ಸಂಜಯ ಜೈನ್ ಅವರಿಗೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವಿಶೇಷ ಚೇತನರ ತಾಲೂಕು ಘಟಕ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಇಲ್ಲಿನ ಜನರ ಬಹುದಿನದ ಕನಸು, ಇಂತಹ ಮಹತ್ವದ ಕೆಲಸಕ್ಕೆ ಸ್ವಯಂಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿದ ವರ್ತಕ ಸಂಜಯ ಜೈನ್ ಇನ್ನಿತರ ಮಾಲೀಕರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು. ಅಗಲೀಕರಣವಾಗುವ ಸಂಪೂರ್ಣ ವಿಶ್ವಾಸವಿದೆ, ಯಾವುದೇ ಉಹಾಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ, ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಸೇರಿದಂತೆ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿ ಎಲ್ಲಾ ಕಾರ್ಯಗಳನ್ನು ಸುಗಮಗೊಳಿಸಿದ್ದಾರೆ ಎಂದರು.ಹೈಕೋರ್ಟ್‌ ಆದೇಶ ಗೌರವಿಸೋಣ: ಹೈಕೋರ್ಟನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಚಂದ್ರಕಲಾ ಅವರು ನೀಡಿದ ಆದೇಶವನ್ನು ನಾವೆಲ್ಲರೂ ಗೌರವಿಸೋಣ, ಇದೀಗ ಘೋಷಿಸಿರುವ ಪರಿಹಾರದ ಮೊತ್ತವನ್ನು ಕೊಟ್ಟು ಭೂಸ್ವಾಧೀನಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಅವಕಾಶ ನೀಡಿದೆ, ಒಂದು ವೇಳೆ ಮಾಲೀಕರಿಗೆ ಪರಿಹಾರದ ಮೊತ್ತ ಕಡಿಮೆ ಎನಿಸಿದ್ದಲ್ಲಿ ಎರಡನೇ ಬಾರಿ ಪರಿಹಾರಕ್ಕೆ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ ಎಂದರು.

ಐತಿಹಾಸಿಕ ನಿರ್ಧಾರ: ಭೂಸ್ವಾಧೀನಪಡಿಸಿಕೊಂಡು ದಶಕಗಳೇ ಕಳೆದರೂ ಇಂದಿಗೂ ಪರಿಹಾರ ಕಾಣದ ಸಾಕಷ್ಟು ಪ್ರಕರಣಗಳಿವೆ, ಇವುಗಳ ಮಧ್ಯೆ ಹಾವೇರಿ ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ಹಾಗೂ ಹಾವೇರಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಭೂಸ್ವಾಧೀನಕ್ಕೂ ಮುನ್ನವೇ ಪರಿಹಾರದ ಹಣ ನೀಡಲು ಕ್ರಮ ಕೈಗೊಂಡಿದ್ದು ರಾಜ್ಯದಲ್ಲೇ ಐತಿಹಾಸಿಕ ನಿರ್ಧಾರವಾಗಿದೆ. ಬಿಡಿಗಾಸು ವ್ಯಯಿಸದೇ ಪರಿಹಾರ ಪಡೆಯಲು ಮುಖ್ಯರಸ್ತೆ ಇನ್ನುಳಿದ ಮಾಲೀಕರು ನಿರ್ಧರಿಸುವಂತೆ ಮನವಿ ಮಾಡಿದರು.ಅನುಮಾನಗಳಿಗೆ ತೆರೆ: ಕರವೇ ಮುಖಂಡ ಮಹೇಶ ಉಜ್ಜನಿ ಮಾತನಾಡಿ, ಪರಿಹಾರ ಮೊತ್ತವನ್ನು ಸರ್ಕಾರ ಮೊದಲೇ ನೀಡುವ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ, ಆದರೆ ಕೆಲವರು ಕೊಟ್ಟ ಮಾತು ಮರೆತು ಮತ್ತೆ ಅಡ್ಡಿಪಡಿಸುವುದು ಸರಿಯಲ್ಲ ಸಂಜಯಜೈನ್ ಅವರಂತೆ ಇನ್ನುಳಿದವರು ಪರಿಹಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಲಿ ಎಂದರು. ಈ ವೇಳೆ ದೀಕ್ಷಯ ಜೈನ್, ಗುತ್ತೆಮ್ಮ ಮಾಳಗಿ, ಹರೀಶಕುಮಾರ ರಿತ್ತಿ, ಬಸವರಾಜ ಹಾವನೂರ, ಪಾಂಡುರಂಗ ಸುತಾರ, ಬೀರೇಶ ಹಾವನೂರ, ಪ್ರವೀಣ ಬಿಜ್ಜೂರ, ಮುತ್ತು ಸೊಪ್ಪಿನಮಠ ಇನ್ನಿತರರಿದ್ದರು.