ಸಾರಾಂಶ
ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಹಿರಿಯ ನಟಿ ದಿವಂಗತ ಡಾ.ಎಂ.ಲೀಲಾವತಿ ಅವರ ಪುತ್ರ, ನಟ ವಿನೋದ್ ರಾಜ್ ಬುಧವಾರ ದಾಬಸ್‌ಪೇಟೆಯ ಸೋಲದೇವನಹಳ್ಳಿಯ ತಮ್ಮ ಸ್ವಗೃಹದಲ್ಲಿ ತಾನು ಯಾವುದೇ ರೀತಿಯ ಸಂಧಾನಕಾರನಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಲದೇವನಹಳ್ಳಿಯ ಸ್ವಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆಮೃತ ರೇಣುಕಾಸ್ವಾಮಿ ಅವರ ಕುಟುಂಬದ ಭೇಟಿ ನಂತರ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಹಿರಿಯ ನಟಿ ದಿವಂಗತ ಡಾ.ಎಂ.ಲೀಲಾವತಿ ಅವರ ಪುತ್ರ, ನಟ ವಿನೋದ್ ರಾಜ್ ಬುಧವಾರ ಸೋಲದೇವನಹಳ್ಳಿಯ ತಮ್ಮ ಸ್ವಗೃಹದಲ್ಲಿ ತಾನು ಯಾವುದೇ ರೀತಿಯ ಸಂಧಾನಕಾರನಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಟ ದರ್ಶನ್ ಅವರೊಬ್ಬ ಕಲಾವಿದರಾಗಿ ನನಗೆ ಸ್ನೇಹಿತರು. ಅವರು ಜೈಲು ಪಾಲಾಗಿರುವುದಕ್ಕೆ ಸೌಜನ್ಯದ ರೀತಿಯಲ್ಲಿ ನಾನೂ ಕೂಡ ಒಬ್ಬ ಚಲನಚಿತ್ರ ನಟ, ಕಲಾವಿದನಾಗಿ ಅವರ ಕುಶಲೋಪರಿ ವಿಚಾರಿಸಲು ಭೇಟಿ ನೀಡಿದ್ದೆ. ಅದೇ ರೀತಿ ಕೊಲೆಯಾಗಿರುವ ರೇಣುಕಾಸ್ವಾಮಿ ಅವರ ಮಡದಿ ಗರ್ಭಿಣಿ ಎಂದು ತಿಳಿದು, ಮುಂದಿನ ದಿನಗಳಲ್ಲಿ ಮಗುವಿಗೆ ಒಳ್ಳೆಯದಾಗಲೆಂಬ ಉದ್ದೇಶದಿಂದ ಅವರನ್ನು ನೇರ ಭೇಟಿ ಮಾಡಿ ಸಾಂತ್ವನದ ನುಡಿಗಳೊಂದಿಗೆ ನನ್ನ ಕೈಲಾದಷ್ಟು ಸಣ್ಣ ಪ್ರಮಾಣದ ಆರ್ಥಿಕ ನೆರವು ನೀಡಿದ್ದೇನೆ ಅಷ್ಟೇ ಎಂದು ಭೇಟಿಗೆ ಕಾರಣ ಹೇಳಿದರು.ಸಂಧಾನವಿಲ್ಲ:
ಹುಟ್ಟುವ ಮಗುವಿಗೆ ನನ್ನಿಂದ ಒಳ್ಳೆಯದನ್ನು ಮಾಡಲಿಕ್ಕೆ ಆಗುತ್ತದೆಯೇ ಎಂಬ ಉದ್ದೇಶ ಮತ್ತು ಆ ಒಂದು ದೃಷ್ಟಿಯಲ್ಲಿ ನನ್ನಿಂದಾದ ಸಣ್ಣ ಆರ್ಥಿಕ ನೆರವು ನೀಡಿದ್ದೇನೆ. ಆದರೆ ನಾನು ಯಾವುದೇ ರೀತಿಯ ಸಂಧಾನ ಮಾಡಲು ಹೋಗಿಲ್ಲ, ಹೋಗಲೂ ಸಾಧ್ಯವಿಲ್ಲ. ಆ ಕೆಲಸವನ್ನು ನಾನು ಮಾಡುವುದೂ ಇಲ್ಲ ಎಂದು ವಿನೋದ್‌ರಾಜ್ ಸ್ಪಷ್ಟನೆ ನೀಡಿದರು.ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿದ್ದರು. ಬಳಿಕ ಹತ್ಯೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರ ಕುಟುಂಬವನ್ನೂ ಮೂರು ದಿನಗಳ ನಂತರ ವಿನೋದ್ ರಾಜ್ ಭೇಟಿ ಮಾಡಿದ್ದರು. ಅವರ ಪತ್ನಿ ಮತ್ತು ಕುಟುಂಬವನ್ನು ಸಂತೈಸಿ ಒಂದು ಲಕ್ಷ ರು.ಗಳ ಚೆಕ್ ನೀಡಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಇದರ ನಡುವೆ ಸಾಮಾಜಿಕ ತಾಣಗಳಲ್ಲಿ ನಟ ವಿನೋದ್ ರಾಜ್ ಅವರು ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ಆರೋಪಿ, ಚಲನಚಿತ್ರ ನಟ ದರ್ಶನ್ ಪರ ಸಂಧಾನಕ್ಕಾಗಿಯೇ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ಅವರ ಮಾತುಕತೆ ಹಿನ್ನೆಲೆಯಲ್ಲೇ ಈ ಭೇಟಿ ಆಗಿರಬಹುದು ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.