ಸಾರಾಂಶ
ಹಾನಗಲ್ಲ: ಹಿಂದೆಯೂ ಹೆದರಿಲ್ಲ, ಮುಂದಿನ ವಿಧಾನಸಭೆ ಚುನಾವಣೆಗೂ ನಾನು ಹೆದರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಹಾನಗಲ್ಲ ಜನತೆ ನನ್ನನ್ನು ದತ್ತಕ ಮಗನಾಗಿ ಸ್ವೀಕರಿಸಿದ್ದಾರೆ. ನಮ್ಮೂರು ನಮ್ಮವರು ಎನ್ನುವವರು, ಮಣ್ಣಿನ ಮಗ ಎಂದು ಹೇಳುವವರು ಕೋರೋನಾ ಸಂದರ್ಭದಲ್ಲಿ ಎಲ್ಲಿದ್ದರು? ಎಂದು ಶಾಸಕ ಶ್ರೀನಿವಾಸ ಮಾನೆ ಕುಟುಕಿದರು.ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದ ಮನೆಗಳ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ಸೇವೆಗಾಗಿ ಬಂದಿದ್ದೇನೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಮುಂದಿನ ವಿಧಾನಸಭೆ ಚುನಾವಣೆ ಆಕಾಂಕ್ಷಿತರು ಎನ್ನುವವರು ನಮ್ಮೂರು ನಮ್ಮವರು ಎಂಬ ಹೆಸರಿನಲ್ಲಿ ಹಾಗೂ ಮಣ್ಣಿನ ಮಗ ಎಂಬ ಹೆಸರಿನಲ್ಲಿ ನನ್ನ ಮೇಲೆ ಸುಳ್ಳು ಆರೋಪಗಳ ಮೂಲಕ ಈ ತಾಲೂಕಿನ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ನನ್ನಿಂದಾದ ತಾಲೂಕಿನ ಅಭಿವೃದ್ಧಿಗೆ ನಾನು ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ನೀವೂ ತಾಲೂಕಿನ ಅಭಿವೃದ್ಧಿಗೆ ಗಮನ ಕೊಡಿ. ಇಲ್ಲವೆ ನನ್ನೊಂದಿಗೆ ತಾಲೂಕಿನ ಅಭಿವೃದ್ಧಿಗಾಗಿ ಕೈ ಜೋಡಿಸಿ. ಆದರೆ ವಿನಾಕಾರಣ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವುದರಿಂದ ಯಾವುದೇ ಪರಿಣಾಮವಾಗದು ಎಂದು ಕಿಡಿ ಕಾರಿದರು. ಈ ಹಿಂದಿನ ಎರಡೂ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿಯೇ ನಾನು ಹೆದರಿಲ್ಲ. ಈಗಂತೂ ಹಾನಗಲ್ಲ ತಾಲೂಕಿನ ಜನತೆ ನನ್ನನ್ನು ತಾಲೂಕಿನ ದತ್ತು ಪುತ್ತನೆಂದೇ ಸ್ವೀಕರಿಸಿದ್ದಾರೆ. ಆಗ ಇನ್ನೂ ಇಡೀ ತಾಲೂಕಿನಲ್ಲಿ ಇಷ್ಟೊಂದು ಸಂಪರ್ಕವೂ ಇರಲಿಲ್ಲ. ಈಗ ತಾಲೂಕಿನ ಎಲ್ಲ ಗ್ರಾಮಗಳ ಮನೆ ಜನರ ಪರಿಚಯ ನನಗಿದೆ. ಹಾಗೂ ನನ್ನ ಸೇವಾ ಕಾರ್ಯದ ಪರಿಚಯ ಜನರಿಗಿದೆ. ಈಗ ನಾನು ಹೆದರಬೇಕೆ? ಎಂದು ಪ್ರಶ್ನಿಸಿದ ಅವರು, ನಾನೂ ಈ ಮಣ್ಣಿನ ಮಗನಾಗಿಯೇ ಸೇವೆ ಸಲ್ಲಿಸಲು ಬಂದಿದ್ದೇನೆ. ಈ ನಾಡಿನ ಜನರ ಸೇವೆಗೆ ನಾನು ಕಟಿಬದ್ಧ. ಜನರ ಮನಸ್ಸನ್ನು ಕಲಕುವ ಕೆಲಸ ಮಾಡಬೇಡಿ. ನನ್ನಿಂದ ಆಗಲಾರದ್ದನ್ನು ನೀವು ಮಾಡಿ. ನನ್ನ ಸಹಕಾರವಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿದಾಗ ಬೆಂಬಲಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಕೋರೋನಾ ಸಂದರ್ಭದಲ್ಲಿ ಇತ್ತ ತಲೆ ಹಾಕದೇ ಇದ್ದವರಿಗೆ ಈಗ ನನ್ನೂರು ನಮ್ಮವರು, ಮಣ್ಣಿನ ಮಗ ಎಂದು ನೆನಪಾಗಿದೆ ಎಂದು ಕಿಡಿ ಕಾರಿ, ಸುಳ್ಳು ಹೇಳುವವರಿಗೆ ಸರಿಯಾದ ಉತ್ತರ ಕೊಡಿ ಎಂದು ಜನತೆಗೆ ಮನವಿ ಮಾಡಿದರು.;Resize=(128,128))