ಕನ್ನಡಪ್ರಭ ವಾರ್ತೆ ಹರಿಹರ
ನನ್ನ ಹೆಸರಲ್ಲಿ ಒಂದು ಇಂಚೂ ಭೂಮಿ ಇಲ್ಲ. ಹಣ ಮಾಡಲು ಇಲ್ಲಿಗೆ ಬಂದಿಲ್ಲ. ಇಲ್ಲಿನ ಹಣದ ಜವಾಬ್ದಾರಿಗಳು ಟ್ರಸ್ಟಿಗಳೇ ನೋಡಿಕೊಳ್ಳುತ್ತಾರೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಮಂಗಳವಾರ ಮಠಕ್ಕೆ ಆಗಮಿಸಿದ್ದ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿ, ಪೀಠವು ಸಮಾಜದ ಬಡವರ ಬೆವರಿನ ಪ್ರತೀಕ. ಪೀಠವನ್ನು ನಾನು ಹುಡುಕಿಕೊಂಡು ಬಂದಿಲ್ಲ. ಪೀಠವೇ ನನ್ನನ್ನು ಹುಡುಕಿಕೊಂಡು ಬಂದಿದೆ. ನಾನು ಸನ್ಯಾಸತ್ವ ಸ್ವೀಕರಿಸಿ ಮುಂಬರುವ ಗುರುಪೂರ್ಣಿಮೆಗೆ 25 ವರ್ಷವಾಗುತ್ತದೆ. ಇದುವರೆಗೆ ನನ್ನ ಪೂರ್ವಜನ್ಮದ ತಂದೆ ಅಂತಿಮ ಗಳಿಗೆಯಲ್ಲಿದ್ದಾಗ ಹೋಗಿದ್ದೆ. ಅವರು ತೀರಿಕೊಂಡಿದ್ದ ಕಾರಣ ಆಸ್ಪತ್ರೆಯಲ್ಲಿಯೇ ಹಾರ ಹಾಕಿ ಬಂದಿದ್ದೆ. ಮತ್ತೆ ಅಲ್ಲಿ ಪಾದ ಇಟ್ಟಿಲ್ಲ ಎಂದರು.
ನನ್ನ ಹೆಸರಲ್ಲಿ ಒಂದಿಂಚೂ ಭೂಮಿ ಇಲ್ಲ. ಹಣ ಮಾಡಲು ಇಲ್ಲಿಗೆ ಬಂದಿಲ್ಲ. ಇಲ್ಲಿನ ಹಣದ ಜವಾಬ್ದಾರಿಗಳು ಟ್ರಸ್ಟಿಗಳೇ ನೋಡಿಕೊಳ್ಳುತ್ತಾರೆ. ಪೀಠಾಧ್ಯಕ್ಷನಾದ ಮೇಲೆ 1 ರುಪಾಯಿಯನ್ನು ಸಹ ನಾನು ಸ್ವೀಕರಿಸಿಲ್ಲ. ಬೆಂಗಳೂರಿನಲ್ಲಿ ಇರುವ ಶ್ವಾಸ ಪೀಠಕ್ಕೆ ಇಲ್ಲಿಂದಲೇ ಹಣ ಹೋಗುತ್ತದೆ ಎಂದು ಕೆಲವರು ಆಡಿದ್ದಾರೆ. 2018ರಿಂದ ಇಲ್ಲಿಯವರೆಗಿನ ನನ್ನ ಬ್ಯಾಂಕ್ ಖಾತೆಯ ವಿವರ ನೀಡುತ್ತೇನೆ. ಬೆಂಗಳೂರು ಮೂಲಕ ಎಲ್ಲಿಗಾದರೂ ಹೋಗಬೇಕಾದಾಗ ಮಾತ್ರ ಅಲ್ಲಿನ ಆಶ್ರಮದಲ್ಲಿ ತಂಗುತ್ತೇನೆ. ಆ ಆಶ್ರಮ ಬಾಡಿಗೆ ಕಟ್ಟಡದಲ್ಲಿ ಇದೆ. ಇದುವರೆಗೆ ನನ್ನ ಕೈ, ಬಾಯಿ ಶುದ್ಧವಾಗಿದೆ ಎಂದರು.ಪಂಚಮಸಾಲಿ ಸಮಾಜವೇ ನನ್ನ ಶ್ವಾಸ, ನನ್ನ ಶಕ್ತಿ ಹಾಗೂ ಸಾಮರ್ಥ್ಯವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ. ಸಮಾಜದ ಸಂಸ್ಕೃತಿ, ಪರಂಪರೆ ಉಳಿಸಿ-ಬೆಳಸಲು ಇನ್ನು ಮುಂದೆ ಸಮಾಜದ ಅತಿ ಬಡವನ ಮನೆಗೂ ಹೊಗುತ್ತೇನೆ ಎಂದರು.