ಕ್ಷೇತ್ರದ ಜನರ ಋಣ ತೀರಿಸುತ್ತಿದ್ದೇನೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Feb 04 2024, 01:32 AM IST

ಸಾರಾಂಶ

ಬಿಜೆಪಿ ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಬರುತ್ತಿದ್ದಾರೆ ಹೊರತು ಗ್ರಾಮ, ನಾಡು ಹಾಗೂ ಜನರ ಬದುಕಿಗೆ ಜವಾಬ್ದಾರರು ಅಲ್ಲ. ಭಾವನೆಗಳ ಮೂಲಕ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಭಾವನೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿರುವ ಬಗ್ಗೆ ಮಂಡ್ಯ ಜಿಲ್ಲೆಯ ಜನರಿಗೆ ಸಂಪೂರ್ಣ ಅರಿವು ಇದೆ. ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿಮತದಾರರ ಶಕ್ತಿಯಿಂದ ನೂರಾರು ಕೋಟಿ ರು. ಅನುದಾನವನ್ನು ಸರ್ಕಾರದಿಂದ ತಂದು ಕ್ಷೇತ್ರದ ಜನರ ಸೇವೆಗೆ ವಿನಿಯೋಗಿಸುವ ಮೂಲಕ ಋಣ ತೀರಿಸುವ ಕಾಯಕದಲ್ಲಿ ತೊಡಗಿದ್ದೇನೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ರಾಗಿಬೊಮ್ಮನಹಳ್ಳಿ ಹಾಗೂ ಹಂಗ್ರಪುರ ಗ್ರಾಮದಲ್ಲಿ 2 ಕೋಟಿ ರು. ವೆಚ್ಚದ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.

ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಅಶೀರ್ವಾದ ಮಾಡಿರುವ ಜವಾಬ್ದಾರಿಯಲ್ಲಿ ಕಿರುಗಾವಲು ಕಸಬಾ ಹೋಬಳಿಗಳಿಗೆ ಅನುಕೂಲವಾಗುವಂತೆ 300 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕೈಗೊಳ್ಳುವ ನಾಲಾ ಆಧುನೀಕರಣ ಕಾಮಗಾರಿ ಮುಗಿದ ನಂತರ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಲಾಗುವುದು ಎಂದರು.

ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಂಗ್ರಪುರದ ಸೇತುವೆ ನಿರ್ಮಾಣ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಜೊತೆಗೆ ಎಲ್ಲ ಗ್ರಾಮಗಳಿಗೆ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಿಜೆಪಿ ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಬರುತ್ತಿದ್ದಾರೆ ಹೊರತು ಗ್ರಾಮ, ನಾಡು ಹಾಗೂ ಜನರ ಬದುಕಿಗೆ ಜವಾಬ್ದಾರರು ಅಲ್ಲ. ಭಾವನೆಗಳ ಮೂಲಕ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಭಾವನೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದರು.

ರೈತನಿಗೆ ನಿಜವಾದ ವೃತ್ತಿಯೇ ಬೇಸಾಯ. ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿರುವ ಬಗ್ಗೆ ಮಂಡ್ಯ ಜಿಲ್ಲೆಯ ಜನರಿಗೆ ಸಂಪೂರ್ಣ ಅರಿವು ಇದೆ. ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ವಷ್ಟಪಡಿಸಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ವಿಶ್ವಾಸ್, ಗ್ರಾಪಂ ಅಧ್ಯಕ್ಷ ರವಿ, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ಶಿವು, ಗುಂಡಶೆಟ್ಟಿ, ಪ್ರಭು, ಚಂಧ್ರು, ರೂಪರಾಣಿ, ಮಂಗಳಮ್ಮ, ಮುಖಂಡರಾದ ಸಿದ್ದಪ್ಪ, ನೀಲಕಂಠಸ್ವಾಮಿ, ಜಯಶಂಕರ್ ಸೇರಿದಂತೆ ಇತರರು ಇದ್ದರು.