ಸಾರಾಂಶ
ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೆ ಸಿಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸದಿಂದ ನುಡಿದಿದ್ದಾರೆ.
ಕನ್ನಡಪ್ರಭ ವಾರ್ತೆ, ನಾಗಮಂಗಲ
ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೆ ಸಿಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸದಿಂದ ನುಡಿದಿದ್ದಾರೆ.ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚುಂಚನಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನನ್ನು ಬರಲು ಹೇಳಿದರೆ ಮಾತ್ರ ಹೋಗುತ್ತೇನೆ. ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಯಾವಾಗ ಬರುವುದೋ ಆಗಲೇ ನಮ್ಮದೂ ಬರಲಿದೆ ಎಂದರು.
ಚುನಾವಣೆ ತಯಾರಿ ಬಗ್ಗೆ ಯಾವುದೇ ನಿರ್ದಿಷ್ಟ ಯೋಜನೆ ರೂಪಿಸಿಕೊಂಡಿಲ್ಲ. ಈ ಬಾರಿ ಒಂದು ರಾಜಕೀಯ ಪಕ್ಷದ ಚಿಹ್ನೆಯಡಿ ನಾನು ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಎಲ್ಲವೂ ವಿಭಿನ್ನವಾಗಿರಲಿದೆ ಎಂದರು.ಯಶ್, ದರ್ಶನ್ ಪ್ರಚಾರಕ್ಕೆ ಬಂದರೆ ಬಲ ಇರುತ್ತೆ, ಕಳೆದ ಚುನಾವಣೆ ಸಮಯದಲ್ಲಿ ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ದರು. ಪದೇ ಪದೇ ಎಲ್ಲಾ ಬಿಟ್ಟು ಪ್ರಚಾರಕ್ಕೆ ಬನ್ನಿ ಎಂದು ಕರೆಯೋದು ಸರಿಯಲ್ಲ. ಅವರೇ ಪ್ರಚಾರಕ್ಕೆ ಬರೋದಾದರೆ ಖಂಡಿತವಾಗಿಯೂ ಹಾರ್ಟ್ಲಿ ವೆಲ್ ಕಮ್ ಮಾಡುತ್ತೇನೆ. ಅವರು ಪ್ರಚಾರಕ್ಕೆ ಬರಲಿಲ್ಲವೆಂದರೂ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ ಎಂದರು.
ಮಂಡ್ಯದಲ್ಲಿ ನಾನು ಬಾಡಿಗೆ ಮನೆಯಲ್ಲಿದ್ದೇನೆ. ದೇವರ ಆಶೀರ್ವಾದವಿದ್ದರೆ ಮುಂದೆ ಮಂಡ್ಯದಲ್ಲಿ ಮನೆ ಕಟ್ಟುತ್ತೇನೆ. ನನಗಿಂತ ಅಭಿಗೆ ಮಂಡ್ಯದಲ್ಲಿ ಮನೆ ಕಟ್ಟಲು ತುಂಬಾ ಆಸೆ ಇದೆ ಎಂದು ಹೇಳಿದರು.