ಧರ್ಮ ಇರುವವರೆಗೂ ಭಾರತ ಇರುತ್ತದೆ, ಧರ್ಮ ಎಂದರೆ ಪೂಜಾ ಪದ್ಧತಿ, ಒಳ್ಳೆಯ ಕೆಲಸ ಮಾಡುವುದು, ಧರ್ಮ ಎನ್ನುವುದು ಇನ್ನೊಬ್ಬರ ಬಗ್ಗೆ ದ್ವೇಷ ಕಾರುವುದಲ್ಲ, ಸರಳವಾದ ಬದುಕಿನ ವಿಧಾನವೇ ಧರ್ಮ

ಹರಪನಹಳ್ಳಿ: ನಾನು ಶ್ರೇಷ್ಠ, ನನ್ನದು ಶ್ರೇಷ್ಠ ಎಂದು ಹೇಳಿಕೊಳ್ಳುವವ ಹಿಂದೂ ಆಗಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ ಮಠದ ಹೇಳಿದರು.

ಅವರು ನಗರದ ಹಳೆಯ ಬಸ್‌ ನಿಲ್ದಾಣದಲ್ಲಿ ಹಿಂದೂ ಸಮ್ಮೇಳನ ಸಮಿತಿ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ಧರ್ಮ ಪ್ರಧಾನವಾದುದು, ಧರ್ಮ ಇರುವವರೆಗೂ ಭಾರತ ಇರುತ್ತದೆ, ಧರ್ಮ ಎಂದರೆ ಪೂಜಾ ಪದ್ಧತಿ, ಒಳ್ಳೆಯ ಕೆಲಸ ಮಾಡುವುದು, ಧರ್ಮ ಎನ್ನುವುದು ಇನ್ನೊಬ್ಬರ ಬಗ್ಗೆ ದ್ವೇಷ ಕಾರುವುದಲ್ಲ, ಸರಳವಾದ ಬದುಕಿನ ವಿಧಾನವೇ ಧರ್ಮ. ಹೀಗೆ ಧರ್ಮದ ವ್ಯಾಖ್ಯಾನಗಳು ಎಂದ ಅವರು, ಧರ್ಮ ಎಂದರೆ ಕೋಮುವಾದಿ ಅಲ್ಲ ಎಂದು ಹೇಳಿದರು.ಹಿಂದೂ ಧರ್ಮವನ್ನು ತುಂಬ ಜನರು ಅಪಾರ್ಥ ಮಾಡಿಕೊಂಡಿದ್ದಾರೆ. ಭಾರತವನ್ನು ಗುರುತಿಸುವುದು ಹಿಂದುತ್ವದಿಂದ, ಹಿಂದೂ ಧರ್ಮ ಕೋಮುವಾದಿಯಾಗಲು ಸಾಧ್ಯವಿಲ್ಲ. ದಾರ್ಶನಿಕರು, ಮಹನೀಯರನ್ನು ಆಯಾ ಜಾತಿಗಳಿಗೆ ಸೀಮಿತಗೊಳಿಸಿದ್ದಾರೆ ಎಂದು ವಿಷಾದಿಸಿದರು.

ಇಲ್ಲಿಯ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತದ ಆತ್ಮವೆಂದರೆ ಸನಾತನ ಹಿಂದೂ ಧರ್ಮ. ಸಾವಿರಾರು ವರ್ಷಗಳಿಂದ ಮಾನವತೆಯನ್ನು ದಾರಿ ತೋರಿಸಿದ ಧರ್ಮ ಇದು. ವಸುದೈವ ಕುಟುಂಬಕಂ ಎಂಬ ಮಹಾಮಂತ್ರವನ್ನು ಜಗತ್ತಿಗೆ ನೀಡಿದ ನಮ್ಮ ಧರ್ಮ ಸರ್ವರಲ್ಲೂ ಒಂದೇ ಚೈತನ್ಯವಿದೆ ಎಂಬ ಸಂದೇಶವನ್ನು ಸಾರಿದೆ ಎಂದು ಹೇಳಿದರು.

ಹಿಂದೂ ಧರ್ಮ ಕೇವಲ ಪೂಜಾ ವಿಧಾನವಲ್ಲ; ಅದು ಜೀವನ ವಿಧಾನ. ಸತ್ಯ, ಅಹಿಂಸೆ, ತ್ಯಾಗ, ಸಹಿಷ್ಣುತೆ ಮತ್ತು ಕರುಣೆ ಇವೇ ನಮ್ಮ ಸಂಸ್ಕಾರದ ಆಧಾರಸ್ತಂಭಗಳು. ಕಾಲಕ್ರಮೇಣ ವಿಭಿನ್ನ ಮತ-ಪಂಥಗಳು ಉದಯವಾದರೂ ಎಲ್ಲರನ್ನೂ ಅಪ್ಪಿಕೊಂಡು ಸಾಗಿದ ಸನಾತನ ಧರ್ಮದ ವಿಶಾಲತೆ ಅಪಾರ ಎಂದು ನುಡಿದರು.

ಎಲ್ಲರೂ ಜಾತಿ- ಭೇದ ಮರೆತು ಧರ್ಮದ ಮೂಲ ಮೌಲ್ಯಗಳೊಂದಿಗೆ ಒಗ್ಗಟ್ಟಾಗಿ ನಡೆಯೋಣ. ಸನಾತನ ಧರ್ಮದ ಬೆಳಕು ಸದಾ ನಮ್ಮ ಬದುಕನ್ನು ದೀಪಿಸುವಂತೆ ಮಾಡೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದೂ ಸಮಿತಿಯ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಕೆ.ಸಿ. ಗಂಗಾಧರ ವೇದಿಕೆಯಲ್ಲಿ ಆಸೀನರಾಗಿದ್ದರೆ ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವೈ.ಡಿ. ಅಣ್ಣಪ್ಪ, ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ, ಜಿ.ನಂಜನಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ವಿಎಚ್‌ಪಿಯ ಎಚ್.ಎಂ. ಜಗದೀಶ, ಶಿರಗಾನಹಳ್ಳಿ ವಿಶ್ವನಾಥ, ಆರ್.ಲೋಕೇಶ, ಮುತ್ತಿಗೆ ವಾಗೀಶ, ಕೃಷ್ಣಮೂರ್ತಿ, ಮಂಜುನಾಥ ಇಜಂತಕರ್, ಮುದುಕನವರ್‌ ಶಂಕರ ಇದ್ದರು.