ದಾವಣಗೆರೆಗೆ ಬಂದಿರುವುದು ನನಗೆ ನನ್ನ ಮನೆಗೆ ಬಂದಷ್ಟೇ ಸಂತೋಷವಾಗಿದೆ. ನಿಮ್ಮ ನಗುಮುಖಗಳನ್ನು ನೋಡಿದರೆ ಯಾವ ಪಟಾಕಿಗಳೂ ಸದ್ದು ಮಾಡಲ್ಲ. ಜೀವನಪೂರ್ತಿ ಈ ಜೀವ ಒದ್ದಾಡುವುದೇ ಈ ನಗುವಿಗೆ ಸಂತೋಷಕ್ಕೆ ಎಂದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಹೇಳಿದ್ದಾರೆ.
- ದಾವಣಗೆರೆಯಲ್ಲಿ ಶ್ರೀ ತರಳಬಾಳು ಜ್ಯೂಯಲರ್ಸ್ ಉದ್ಘಾಟಿಸಿದ ಕ್ರೇಜಿಸ್ಟಾರ್ - - -
- 26 ವರ್ಷ ಹಿಂದೆ ಏಕಾಂಗಿ ಪ್ರಮೋಷನ್ಗೆ ದಾವಣಗೆರೆಯಲ್ಲಿ ದೊಡ್ಡ ಸ್ಟೇಜ್ ಮಾಡಿದ್ದೆವು- "ನಾನು ನನ್ನ ಹೆಂಡ್ತಿ " ಸಿನಿಮಾದ 100ನೇ ದಿನದ ಕಾರ್ಯಕ್ರಮ ಇಲ್ಲಿಯೇ ನಡೆಸಿದ್ದೆವು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಗೆ ಬಂದಿರುವುದು ನನಗೆ ನನ್ನ ಮನೆಗೆ ಬಂದಷ್ಟೇ ಸಂತೋಷವಾಗಿದೆ. ನಿಮ್ಮ ನಗುಮುಖಗಳನ್ನು ನೋಡಿದರೆ ಯಾವ ಪಟಾಕಿಗಳೂ ಸದ್ದು ಮಾಡಲ್ಲ. ಜೀವನಪೂರ್ತಿ ಈ ಜೀವ ಒದ್ದಾಡುವುದೇ ಈ ನಗುವಿಗೆ ಸಂತೋಷಕ್ಕೆ ಎಂದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಹೇಳಿದರು.ನಗರದ ಪಿ.ಬಿ. ರಸ್ತೆಯ ಗಾಂಧಿ ಸರ್ಕಲ್ ಬಳಿ ಗುರುವಾರ ಶ್ರೀ ತರಳಬಾಳು ಜ್ಯೂಯಲರ್ಸ್ ಬಂಗಾರದ ಅಂಗಡಿ ಉದ್ಘಾಟಿಸಿ, ಶುಭ ಹಾರೈಸಿ ನಂತರ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಷಯಗಳನ್ನು ತಿಳಿಸಿ, ಮಾತನಾಡಿದ ಅವರು, ನಮ್ಮ ಮನೆಯಲ್ಲಿ, ಒಟ್ಟಿನಲ್ಲಿ ಒಳ್ಳೆಯ ದಿನಗಳು ಹತ್ತಿರ ಬರುತ್ತಿವೆ. ನಮ್ಮ ಮುಂದಿನ ಹೆಮ್ಮೆಯ ಕಾಣಿಕೆ "ಐ ಆಮ್ ದಿ ಗಾಡ್ ಕ್ರೇಜಿ " ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ನಿಮಗೆ ಇಷ್ಟವಾಗುವಂತಹ 25-30 ಹಾಡುಗಳಿರುತ್ತವೆ. ಕಳೆದ ಮೂರೂವರೆ ವರ್ಷದಿಂದ ತಪಸ್ಸು ಮಾಡಿದಂತಾಗಿದೆ ಎಂದರು.ನಿಮಗೆಲ್ಲಾ ನೆನಪಿರಬೇಕು, 26 ವರ್ಷಗಳ ಹಿಂದೆ ಏಕಾಂಗಿ ಸಿನಿಮಾ ಪ್ರಮೋಷನ್ಗೆ ದಾವಣಗೆರೆಯಲ್ಲಿ ದೊಡ್ಡ ಸ್ಟೇಜ್ ಮಾಡಿದ್ದು ನಾವೇ. ಆ ರಾಮನಿಗೆ 14 ವರ್ಷ ವನವಾಸವಾದರೆ, ನನಗೆ 26 ವರ್ಷ ವನವಾಸ ಆದ ಮೇಲೆ ಬಂದಿದೀನಿ. ಪ್ರೇಮಲೋಕದ ದಿನಗಳು ಶುರುವಾಗುತ್ತವೆ ಅನ್ನುವುದು ಗ್ಯಾರಂಟಿ ಎಂದು ಹೇಳಿದರು.
ಈ ಹಿಂದೆ "ನಾನು ನನ್ನ ಹೆಂಡ್ತಿ " ಹೆಸರಿನ ನನ್ನ ಸಿನಿಮಾದ 100ನೇ ದಿನದ ಕಾರ್ಯಕ್ರಮವನ್ನು ಮೊದಲ ಬಾರಿಗೆ ಇದೇ ದಾವಣಗೆರೆಯಲ್ಲಿಯೇ ಮಾಡಿದ್ದು. ಆಗ ಜೊತೆಗೆ ನನ್ನ ಹೆಂಡತಿ ಕರೆತಂದಿದ್ದೆ. 40 ವರ್ಷ ಆಗಿಹೋಯಿತು. ಸಮಯ ಎಷ್ಟು ಬೇಗ ಮುಂದೆ ಹೋಗುತ್ತಿದೆ ಅನ್ನುವುದೇ ಗೊತ್ತಾಗಿಲ್ಲ. ಅನಂತರ ಏಕಾಂಗಿ ಸಿನಿಮಾ ಪ್ರಮೋಷನ್ಗೆ ಬಂದು ಹೋಗಿ 26 ವರ್ಷ ಆದ ಮೇಲೆ ಮತ್ತೆ ತರಳಬಾಳು ಜ್ಯೂಯಲರ್ಸ್ನ ಮಂಜುನಾಥ ಅವರಿಂದ ದಾವಣಗೆರೆಗೆ ಬರುವ ಅವಕಾಶ ಸಿಕ್ಕಿತು. ನನಗೆ ನಿಮ್ಮೆಲ್ಲರನ್ನೂ ನೋಡಿ ಬಹಳ ಸಂತೋಷವಾಗಿದೆ ಎಂದರು.ಈ ಶುಭ ದಿನದಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣಿಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಹಡಗಲಿಯ ಶ್ರೀ ಹಾಲಸ್ವಾಮೀಜಿ ಆಶೀರ್ವದಿಸಿ ಶುಭ ಕೋರಿದರು. ಮಾಜಿ ಸಂಸದ ಡಾ. ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಅನೇಕ ಗಣ್ಯರು, ರೈತರು, ಸ್ನೇಹಿತರು, ಗ್ರಾಹಕರು ಶುಭ ಕೋರಿದರು.
ಈ ಸಂದರ್ಭ ಶ್ರೀ ತರಳಬಾಳು ಜ್ಯೂಯಲರ್ಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಮಂಜುನಾಥ, ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಕುಟುಂಬ ವರ್ಗದವರು, ಗಣ್ಯರು, ಇತರರು, ಅಭಿಮಾನಿಗಳು ಇದ್ದರು.- - -
-12ಕೆಡಿವಿಜಿ35, 36: ದಾವಣಗೆರೆಯಲ್ಲಿ ಗುರುವಾರ ಶ್ರೀ ತರಳಬಾಳು ಜ್ಯೂಯಲರ್ಸ್ ಅಂಗಡಿಯನ್ನು ಹಿರಿಯ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಉದ್ಘಾಟಿಸಿದರು. ಬಿ.ಆರ್.ಮಂಜುನಾಥ, ಕುಟುಂಬದವರು ಇದ್ದರು.