ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಒಂದು ಬಿಡಿಗಾಸು ಹೆಚ್ಚುವರಿ ಅನುದಾನ ನೀಡಲಿಲ್ಲ. ಆದರೆ, ನಮ್ಮ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ ನೀಡಿದ ಅನುದಾನದ ಅರ್ಧದಷ್ಟು ಅನುದಾನವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ನೀಡಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಾಸಕರನ್ನು ನೋಡಿ ನಾನು ಕೆಲಸ ಮಾಡಲ್ಲ. ಕ್ಷೇತ್ರದ ಶಾಸಕರ ಜೊತೆಗೆ ನಮ್ಮ ಪಕ್ಷದ ಮುಖಂಡರ ಮಾತುಗಳಿಗೂ ಬೆಲೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುರಾಯಸ್ವಾಮಿ ತಿಳಿಸಿದರು.ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿ, ಅನುದಾನ ನೀಡಿಕೆಯಲ್ಲಿ ವಿಪಕ್ಷ ಶಾಸಕರಿಗೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಅವರ ಮಾತಿಗೆ ತಮ್ಮ ಭಾಷಣದಲ್ಲಿ ಉತ್ತರಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಒಂದು ಬಿಡಿಗಾಸು ಹೆಚ್ಚುವರಿ ಅನುದಾನ ನೀಡಲಿಲ್ಲ. ಆದರೆ, ನಮ್ಮ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ ನೀಡಿದ ಅನುದಾನದ ಅರ್ಧದಷ್ಟು ಅನುದಾನವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ನೀಡಿದೆ ಎಂದರು.ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡಲ್ಲ. ನಾನು ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೆ.ಆರ್.ಪೇಟೆ ಕ್ಷೇತ್ರದ ಜನ 11 ಸಾವಿರಕ್ಕೂ ಅಧಿಕ ಬಹುಮತ ನೀಡಿ ನನ್ನ ಆಯ್ಕೆಗೆ ಹೆಗಲು ಕೊಟ್ಟಿದ್ದರು. ಇಲ್ಲಿನ ಮತದಾರರ ಋಣ ನನ್ನ ಮೇಲಿದೆ. ನನ್ನ ಇಲಾಖಾ ವ್ಯಾಪ್ತಿಯಲ್ಲಿ 1.20 ಲಕ್ಷ ಸಾವಿರ ಕೋಟಿ ರು. ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
30 ಸಾವಿರ ಕೋಟಿ ರು. ಬಿಲ್ ಪೆಂಡಿಂಗ್ ಇದೆ. ಭೂ ಪರಿಹಾರ ನೀಡದ ಕಾರಣ ಕೆ.ಆರ್.ಪೇಟೆ ನೀರಾವರಿ ಇಲಾಖೆ ಕಚೇರಿ ಜಪ್ತಿಯಾಗಿರುವ ವಿಚಾರ ತಿಳಿದಿದೆ. ಭೂ-ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸುತ್ತೇನೆ ಎಂದರು.ಸ್ವಾರ್ಥ ಬಿಟ್ಟು ನಾನು ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ನಾನು ಆದ್ಯತೆ ನೀಡಿದ್ದೇನೆ. ಪಾಂಡವಪುರ ರೈಲು ನಿಲ್ದಾಣದಿಂದ ಕೆ.ಆರ್.ಪೇಟೆ ಮಾರ್ಗವಾಗಿ ಚನ್ನರಾಯಪಟ್ಟಣ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ದೊರಕಿಸಿಕೊಟ್ಟಿದ್ದೇನೆ ಎಂದರು.
ತಾಲೂಕಿನ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಶೀಘ್ರವೇ ಮುಗಿದು ತಾಲೂಕಿನ ಕೆರೆ-ಕಟ್ಟೆಗಳಿಗೆ ಹೇಮೆ ನೀರು ತುಂಬಲಿದೆ. ಎರಡು ಮತ್ತು ಮೂರನೇ ಹಂತದ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಿ ಇನ್ನೊಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವುದಕ್ಕಾಗಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ದೇಶದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಪ್ರಜಾಸೇವೆ ಇಲಾಖೆ ಅನುಷ್ಠಾನಗೊಳಿಸಿದೆ. ಪ್ರತಿ ತಿಂಗಳ 1 ಮತ್ತು 3 ನೇ ಶನಿವಾರ ನನ್ನ ವ್ಯಾಪ್ತಿಯ ಯಾವುದಾರೊಂದು ತಾಲೂಕಿನಲ್ಲಿ ನಾನು ಪ್ರಜಾಸೇವೆಯಲ್ಲಿ ಭಾಗವಹಿಸಿ ಜನರ ಅಹವಾಲು ಆಲಿಸಿ ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.
ಅರ್ಜಿದಾರರು ತಂತ್ರಾಶದ ಮೂಲಕವೇ ಅರ್ಜಿ ಕೊಡಬೇಕು. ಅರ್ಜಿಯಲ್ಲಿ ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬರೆಯಬೇಕು. ಸಾಮಾನ್ಯರು ನೀಡಿದ ಅರ್ಜಿಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅವರಿಗೆ ಆಯ ಇಲಾಖೆಯಿಂದ ಮಾಹಿತಿ ನೀಡಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದರು.