ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿಎಂ ಬದಲಾವಣೆ ವಿಚಾರ ನಂಗೆ ಗೊತ್ತಿಲ್ಲ. ಸಿಎಂ ಬದಲಾವಣೆ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನನಗೂ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. ನನಗೂ ಕೂಡಾ ಆಹ್ವಾನ ಬಂದಿದೆ. ಹೀಗಾಗಿ ನಾನು ಈಗ ಎಲ್ಲ ಕಾರ್ಯಕ್ರಮ ರದ್ದು ಮಾಡಿ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಜೂನ್‌ 1ರಂದು ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮ ನಿಗದಿ ಆಗಿತ್ತು. ಆದರೆ, ಈಗೀನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮದಲ್ಲಿ ಬದಲಾವಣೆ ಆಗಬಹುದು.

ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಬರುತ್ತಿದ್ದರು. ಈ ಎಲ್ಲ ಬೆಳವಣಿಗೆ ನೋಡಿಕೊಂಡು ಕಾರ್ಯಕ್ರಮ ಕುರಿತು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.


ಮುಖ್ಯಮಂತ್ರಿಗಳ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಸಚಿವನಾಗಿ ರಾಜ್ಯಮಟ್ಟದಲ್ಲಿ ಇರುತ್ತೇವೆ, ಈ ಬಗ್ಗೆ ಹೇಳಲು ಸಣ್ಣವನಾಗುತ್ತೇನೆ. ಊಹಾಪೋಹಗಳ ಸಾಧ್ಯತೆಗಳ ಬಗ್ಗೆ ಮಾತನಾಡುವ ಬದಲು ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೂನ್ 1ರಂದು ಮುಖ್ಯಮಂತ್ರಿಗಳಿಂದ ನಡೆಯಬೇಕಿದ್ದ ಕೆಪಿಎಸ್ ಶಾಲೆಗಳಿಗೆ ಚಾಲನೆ ಕಾರ್ಯಕ್ರಮ ಒಂದೆರಡು ದಿನ ಮುಂದಕ್ಕೆ ಹೋಗಬಹುದು. ಆದರೆ, ಜೂನ್ 1ರಂದೇ ರಾಜ್ಯಾದ್ಯಂತ ಶಾಲೆಗಳು ಆರಂಭಗೊಳ್ಳಲಿವೆ. ವೈಯಕ್ತಿಕವಾಗಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ. ರಾಜ್ಯದಾದ್ಯಂತ ಶಾಲೆಗಳಿಗೆ ನೋಟ್ ಬುಕ್ಸ್, ಸಮವಸ್ತ್ರ, ಶೂ ಎಲ್ಲವೂ ತಲುಪಿದೆ. ರಾಜ್ಯದಲ್ಲಿ ಸಾವಿರ ಕೆಪಿಎಸ್ ಶಾಲೆಗಳ ಚಾಲನೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ. ಶಾಲೆಗಳ ಆರಂಭಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.

ಸಚಿವ ಮಧು ಜಿಲ್ಲಾ ಪ್ರವಾಸ ದಿಢೀರ್ ರದ್ದು

ಕಾಂಗ್ರೆಸ್ ಪಕ್ಷದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಶಿವಮೊಗ್ಗ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿ ಬೆಂಗಳೂರಿಗೆ ತೆರಳಿದರು.

ಬುಧವಾರ ಮುಂಜಾನೆ ಶಿವಮೊಗ್ಗಕ್ಕೆ ಆಗಮಿಸಿದ್ದ ಸಚಿವ ಮಧುಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ರಾಜಕೀಯ ಚಟುವಟಿಕೆ ಗರಿಗೆದರಿದ ಹಿನ್ನೆಲೆಯಲ್ಲಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ನಗರದ ಖಾಸಗಿ ಶುಭಂ ಹೊಟೇಲ್‌ನಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿದರು. ಸಭೆಯ ನಂತರ ಸಚಿವ ಮಧು ಬಂಗಾರಪ್ಪ ಬೆಂಗಳೂರಿಗೆ ತೆರಳಿದರು.

ಜೂ.1 ರಂದು ಶಿವಮೊಗ್ಗಕ್ಕೆ ಮುಖ್ಯಮಂತ್ರಿಗಳು ಆಗಮನ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಿಗದಿಯಾಗಿತ್ತು. ತೀರ್ಥಹಳ್ಳಿಯಲ್ಲಿಯು ಕಾರ್ಯಕರ್ತರ ಸಭೆ ನಿಗದಿಯಾಗಿತ್ತು. ರಾಜ್ಯ ರಾಜಕಾರಣದಲ್ಲಿನ ದಿಢೀರ್ ಬೆಳವಣಿಗೆ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ದಿಢೀರ್ ಬೆಂಗಳೂರಿಗೆ ಮರಳಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದು, ಅಲ್ಲಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ.