ಸಾರಾಂಶ
ಕುರ್ಚಿ ಉಳಿಸಿಕೊಳ್ಳಲು ಜನರಿಗೆ ಮೋಸ ಮಾಡುವುದಿಲ್ಲ, ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ಯಾವುದೇ ಸಂದರ್ಭದಲ್ಲಿ ಸಹ ಜನರನ್ನು ಅಗೌರವದಿಂದ ಕಾಣುವುದಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ಕುರ್ಚಿ ಉಳಿಸಿಕೊಳ್ಳಲು ಜನರಿಗೆ ಮೋಸ ಮಾಡುವುದಿಲ್ಲ, ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ಯಾವುದೇ ಸಂದರ್ಭದಲ್ಲಿ ಸಹ ಜನರನ್ನು ಅಗೌರವದಿಂದ ಕಾಣುವುದಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಸೋಮವಾರ ತಾಲೂಕಿನ ಬಾಳಿಹಳ್ಳಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಹಾನಗಲ್ ಕ್ಷೇತ್ರದ ಜನರ ಋಣದಲ್ಲಿದ್ದೇನೆ. ಅವರ ಬಗೆಗೆ ಹೃದಯದಲ್ಲಿ ಪ್ರೀತಿ ಹೊಂದಿದ್ದೇನೆ. ಕೆಲಸ, ಕಾರ್ಯಗಳಿಗೆ ಜನ ನನ್ನ ಬಳಿ ಹತ್ತಾರು ಬಾರಿ ತಿರುಗಾಡಬಾರದು. ಹಾಗಾಗಿ ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತೇನೆ. ಸುಳ್ಳು ಹೇಳುವುದು, ವಿನಾಕಾರಣ ಸತಾಯಿಸುವುದನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದರು. ಕಾಲ ಬದಲಾದಂತೆ ಕಾನೂನಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿನ ಆಡಳಿತಕ್ಕೆ, ಇಂದಿನ ಆಡಳಿತಕ್ಕೆ ವ್ಯತ್ಯಾಸವಿದೆ. ಪಾರದರ್ಶಕತೆ ಬಂದಿದೆ. ಜಿಪಿಎಸ್, ಕಂಪ್ಯೂಟರ್ ಬಳಕೆ ಹೆಚ್ಚಾಗುತ್ತಿದೆ. ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಹಿಂದಿನ ವ್ಯವಸ್ಥೆಗೂ, ಇಂದಿನ ವ್ಯವಸ್ಥೆಗೂ ಹೋಲಿಕೆ ಮಾಡುವುದರಲ್ಲಿ ಪ್ರಯೋಜನವಿಲ್ಲ. ಜನರ ನೆಮ್ಮದಿಗೆ ಭಂಗ ತರಲು ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ನಿರಂತರ ಪ್ರಯತ್ನಿಸುತ್ತಿದ್ದಾರೆ. ನಮ್ಮ ಸಂಘಟನೆ ಒಡೆಯಲು ಪಿತೂರಿ ನಡೆಸಿದ್ದಾರೆ. ಅಪಪ್ರಚಾರದ ಮೊರೆ ಹೋಗಿದ್ದಾರೆ. ಏನಾದರೊಂದು ಸುಳ್ಳು ಸುದ್ದಿ, ವದಂತಿ ಹರಡಿಸುತ್ತಿದ್ದಾರೆ ಎಂದು ಹೇಳಿದ ಅವರು ಬೆಲೆ ಏರಿಕೆಯಿಂದ ಜನ ಸೋತು ಹೋಗಿದ್ದಾರೆ. ಹಾಗಾಗಿ ಅವರ ಬದುಕು ಸುಧಾರಿಸಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೊರೆ ಹೋಗಿದೆ. ಜೊತೆಗೆ ಅಭಿವೃದ್ಧಿಗೂ ಗಮನ ನೀಡಿದೆ ಎಂದರು. ಮುಖಂಡ ಪರಸಣ್ಣ ಮಡಿವಾಳರ ಮಾತನಾಡಿ, ಬೇಧಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಇಲ್ಲಿ ಎಲ್ಲರಿಗೂ ಬೆಲೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸಮಾನರು. ಸಮಾನತೆ, ಏಕತೆ ಕಾಂಗ್ರೆಸ್ ಪಕ್ಷದ ಉಸಿರು ಎಂದರು. ಇದೇ ಸಂದರ್ಭದಲ್ಲಿ ಮುಖಂಡರಾದ ಭೀಮಪ್ಪ ಮಡಿವಾಳರ, ನಿಂಗಪ್ಪ ಮಡಿವಾಳರ, ಮಂಜಪ್ಪ ಮಡಿವಾಳರ, ನಾಗಪ್ಪ ಮಡಿವಾಳರ, ಧರ್ಮೇಂದ್ರಪ್ಪ ದೊಡ್ಡಮನಿ, ಮಂಜುನಾಥ ಕೂಸನೂರ, ಪ್ರಕಾಶ ಮಡಿವಾಳರ ಸೇರಿದಂತೆ ಇನ್ನೂ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ತಾಪಂ ಕೆಡಿಪಿ ಸದಸ್ಯ ರಾಜಕುಮಾರ ಜೋಗಪ್ಪನವರ, ಮುಖಂಡರಾದ ಈರಣ್ಣ ಬೈಲವಾಳ, ದೇವರಾಜ ಪುರ್ಲಿ, ಶಿವಣ್ಣ ಬೈಚವಳ್ಳಿ, ಫಕ್ಕೀರಪ್ಪ ಗೊಟಗೋಡಿ, ಶಂಭು ಬೈಚವಳ್ಳಿ ಸೇರಿದಂತೆ ಇನ್ನೂ ಹಲವರು ಇದ್ದರು.