ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಯಾರು ಯಾವ ಕಾರಣಕ್ಕಾಗಿ, ಯಾವ ಸಂದರ್ಭಕ್ಕಾಗಿ ರಾಜಕೀಯಕ್ಕೆ ಬರುತ್ತಾರೋ ಗೊತ್ತಿಲ್ಲ. ಆದರೆ ನಾನು ಹಿಂದುತ್ವಕ್ಕಾಗಿ ರಾಜಕೀಯ ಕ್ಷೇತ್ರಕ್ಕೆ ಬಂದವನು. ಶ್ರೀಮಠದಿಂದ ಶಿವಗಂಗೋತ್ರಿ ಪ್ರಶಸ್ತಿ ನೀಡಿರುವುದು ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಮಹಾರುದ್ರಯಾಗ ಕಾರ್ಯಕ್ರಮದಲ್ಲಿ ಶಿವಗಂಗೋತ್ರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಜಾತಿ ಹೆಸರಲ್ಲಿ ಒಡೆದು ಆಳುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಬ್ರಿಟಿಷರು ನಮ್ಮ ದೇಶವನ್ನು ಅವರ ಸಾಮರ್ಥ್ಯದ ಮೇಲೆ ಆಳ್ವಿಕೆ ಮಾಡಲಿಲ್ಲ. ನಮ್ಮ ದೌರ್ಬಲ್ಯದ ಮೇಲೆ ಆಳ್ವಿಕೆ ಮಾಡಿದರು. ಜಾತೀಯತೆ, ಅಸ್ಪೃಶ್ಯತೆ ನಮ್ಮ ದೇಶದ ದೌರ್ಬಲ್ಯ. ಪ್ರತಿಯೊಬ್ಬರಲ್ಲೂ ಭಾಷಾಭಿಮಾನ ಇರಬೇಕು. ಆದರೆ ಭಾಷಾ ಪ್ರಾಂತ್ಯ ಜಗಳವಿರಬಾರದು. ಸಮಾಜದಲ್ಲಿ ಜಾತಿ ಜಗಳ ಹೆಚ್ಚಾಗಿರುವುದು ಆತಂಕಕಾರಿ, ಹಿಂದುತ್ವಕ್ಕಾಗಿ ಹೋರಾಟಕ್ಕೆ ಸದಾ ಸಿದ್ದನಿರುತ್ತೇನೆ, ನಮಗೆ ಹೊರಗಿನ ಶತ್ರುಗಳಿಗಿಂತ, ಒಳಗಿನ ಶತ್ರುಗಳು ಹೆಚ್ಚಾಗಿದ್ದಾರೆ. ಎಲ್ಲರೂ ವಿವಿಧತೆಯಲ್ಲಿ ಏಕತೆಯಾಗಿ ಒಟ್ಟಾಗಿ ಬಾಳೋಣ ಎಂದು ಹೇಳಿದರು.
ಆದರ್ಶದ ಬದುಕು ಮುಖ್ಯ:ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಮಂಜುನಾಥ್ ಮಾತನಾಡಿ, ಸರ್ಕಾರ ಮಾಡಲಾಗದ ಸೇವೆಗಳನ್ನು ನಮ್ಮ ನಾಡಿನ ಮಠಗಳು ಮಾಡುತ್ತಾ ಸಮಾಜಕ್ಕೆ ಕೊಡುಗೆ ನೀಡುತ್ತಿವೆ. ನಮ್ಮ ದೇಶದಲ್ಲಿ ಸಾಕ್ಷರತೆ ಹೆಚ್ಚಾಗಿದೆ. ಸಂಸ್ಕಾರ ಕಡಿಮೆಯಾಗಿರುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದರ್ಶದ ಬದುಕು ಮುಖ್ಯ ಆಕರ್ಷಣೆಯ ಜಗತ್ತು ಬೇಡ, ಬೇರೆಯವರ ನೋವಿಗೆ ಪರಿಹಾರಬೇಕು, 2027 ಭಾರತ 3ನೇ ಸ್ಥಾನವಾಗಿ, ಆರ್ಥಿಕವಾಗಿ ದೊಡ್ಡ ದೇಶವಾಗಲಿದೆ, ಭಾರತವೂ 2044ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ದುಡಿದು ಬೆಳೆಯಬೇಕು, ತುಳಿದು ಬೆಳೆಯಬಾರದು ಎಂದು ಹೇಳಿದರು.
ಮಠದ ಅಭಿವೃದ್ಧಿಗೆ ಸಹಕಾರ:ಸಂಸದ ಗೋವಿಂದ ಕಾರಜೋಳ ಮಾತನಾಡಿ, ನಮ್ಮ ರಾಜ್ಯದಲ್ಲಿ ಸಣ್ಣ ಸಣ್ಣ ಹಿಂದುಳಿದ ಸಾವಿರಾರು ಮಠಗಳಿದ್ದು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಅಂತಹ ಮಠಗಳಲ್ಲಿ ಪಾಲನಹಳ್ಳಿ ಮಠವೂ ಒಂದಾಗಿದ್ದು, ಇಡೀ ಭಕ್ತ ಸಮೂಹ ಒಗ್ಗೂಡಿ ಈ ಮಠವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಮಠದ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲನಹಳ್ಳಿ ಮಠದ ಡಾ.ಶ್ರೀ.ಸಿದ್ದರಾಜು ಸ್ವಾಮೀಜಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬ್ರಹ್ಮಾಂಡ ಗುರೂಜಿ ಶ್ರೀ ನರೇಂದ್ರ ಬಾಬು ಶರ್ಮಾ, ಮೇಲಣಗವಿ ಮಠದ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮೀಜಿ, ಗಾಯಕ ಗುರುರಾಜ್ ಹೊಸಕೋಟೆ, ಶ್ರೀ ಜ್ಞಾನಂದಪುರಿ ಸ್ವಾಮೀಜಿ, 20ಕ್ಕೂ ಅಧಿಕ ಮಠಾಧೀಶರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.