ಸಾರಾಂಶ
ಸಿಪಿಐ - ಸಿಬ್ಬಂದಿ ವಿರುದ್ಧ ನೇರ ಆರೋಪಿರುವ ಅಮಾನತುಗೊಂಡಿರುವ ಸಂಕೇಶ್ವರದ ಪಿಎಸ್‌ಐ ನರಸಿಂಹರಾಜು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ನನ್ನ ವಿರುದ್ಧ ಇಲಾಖೆಯಲ್ಲಿನ ಕೆಲವು ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದು, ಸಿಪಿಐ ಹಾಗೂ ಇಲಾಖೆ ಸಿಬ್ಬಂದಿ ಕುತಂತ್ರಕ್ಕೆ ನಾನು ಬಲಿಯಾಗಿದ್ದೇನೆ. ನಾನು ಆ ಮಹಿಳೆಯನ್ನು ಸಹೋದರಿಯಂತೆ ಕಂಡಿದ್ದೆ. ಆದರೆ, ಠಾಣೆಯೊಳಗೆ ಹಾಗೂ ಹೊರಗೆ ನಡೆದ ಷಡ್ಯಂತ್ರದಿಂದ ನಾನು ಬಲಿಪಶು ಆದೆ ಎಂದು ಅಮಾನತುಗೊಂಡ ಪಿಎಸ್‌ಐ ನರಸಿಂಹರಾಜು ತಮ್ಮ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಗಂಭೀರ ಆರೋಪ ಮಾಡಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಕೇಳಿ ಬಂದಿರುವ ಮಹಿಳೆಗೆ ಕಿರುಕುಳ ಆರೋಪ ಪ್ರಕರಣದಲ್ಲಿ ವಿಚಾರಣೆ ನಡೆಸದೆ ಅಮಾನತು ಮಾಡಿದ್ದಾರೆ. ದೂರು ನೀಡಲು ಬಂದ ಮಹಿಳೆಗೆ ನ್ಯಾಯ ಒದಗಿಸಲು ಶ್ರಮಿಸುವುದರ ಜೊತೆಗೆ ಆಕೆಯ ಮಹಿಳೆಯ ಮಕ್ಕಳ ಆರೋಗ್ಯದ ವಿಚಾರವಾಗಿ ಹಣ ನೀಡಿದ್ದೆ. ಆದರೆ, ಕೆಲವರು ನನ್ನನ್ನು ಬ್ಲಾಕ್ ಮೇಲ್ ಮಾಡಲು ಬಂದಿದ್ದರು. ಇದಕ್ಕೆ ನಾನು ಬಗ್ಗಲಿಲ್ಲ. ಆದ್ದರಿಂದ ಆ ಮಹಿಳೆಯಿಂದ ಬಲವಂತವಾಗಿ ದೂರು ಬರೆಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ, ಕಳಂಕ ಹೊತ್ತು ಸಮಾಜಕ್ಕೆ ಹೇಗೆ ಮುಖ ತೋರಿಸಲಿ? ನಾನು ಈ ಠಾಣೆಗೆ ಬಂದಾಗಿನಿಂದ ನನ್ನ ವಿರುದ್ಧ ಪಿತೂರಿ ನಡೆಯುತ್ತಿವೆ. ಬೇರೆ ಯಾವುದೆ ಆರೋಪ ಮಾಡಿದರೂ ಸುಮ್ಮನಿರುತ್ತಿದ್ದೆ. ಆದರೆ, ಒಬ್ಬ ಮಹಿಳೆ ಜೊತೆಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಹೀಗಾಗಿ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದರು.ಈ ಮಹಿಳೆಯನ್ನು ಮುಂದೆಬಿಟ್ಟು ಈಗಾಗಲೇ ಹಲವಾರು ಜನರಿಗೆ ಇದೇ ರೀತಿ ಮೋಸ ಮಾಡಿರುವ ಜಾಲವಿದೆ. ಈ ಹಿಂದೆ ಸಂಕೇಶ್ವರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಕೆ. ಕಲೋಳಿ ಅವರು ಈ ಜಾಲಕ್ಕೆ ಸಿಲುಕಿ ಅಮಾನತು ಆಗಿದ್ದರು. ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು. ಆಗ ಮಾತ್ರ ಇದರಲ್ಲಿ ಯಾರು ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಇತ್ತೀಚಿಗೆ ಹನಿಟ್ರ್ಯಾಪ ಎಂಬ ಅಸ್ತ್ರ ಪ್ರಯೋಗಿಸಿ ಹಲವರಿಂದ ಹಣ ಸುಲಿಗೆ ಮಾಡುವ ಪ್ರಕರಣಗಳಿಗೆ ಪೊಲೀಸರೆ ನ್ಯಾಯ ಒದಗಿಸಬೇಕಾಗಿತ್ತು. ಆದರೆ, ನಮ್ಮ ಠಾಣೆಯವರೆ ನನ್ನ ವಿರುದ್ಧ ಬೇರೆಯವರನ್ನು ಮುಂದಿಟ್ಟು ಬ್ಲಾಕ್ ಮೇಲ್ ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.-----------