ನಾನು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದವ: ಸೋಮಣ್ಣ

| Published : Mar 28 2024, 12:51 AM IST

ನಾನು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದವ: ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಜನತಾ ಪರಿವಾರದಿಂದ ಬಂದ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು ಎಂದು ಮಾಇ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಾರಂಭ ನಡೆಯಿತು. ಎರಡೂ ಪಕ್ಷಗಳ ಮೈತ್ರಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿ ಪಕ್ಷದ ಕಚೇರಿಗೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಅಭ್ಯರ್ಥಿ ವಿ.ಸೋಮಣ್ಣ, ಜನತಾ ಪರಿವಾರದಿಂದ ಬಂದ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು, ಪ್ರಧಾನಿ ನರೇಂದ್ರ ಮೋದಿ, ನಾಯಕ ಅಮಿತ್ ಷಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತೀರ್ಮಾನ ತೆಗೆದುಕೊಂಡು ನನ್ನನ್ನು ತುಮಕೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು ಎಂದರು.

ತುಮಕೂರಿನಲ್ಲಿ ಜೆಡಿಎಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನಿಗೂ ಅಪಚಾರವಾಗದಂತೆ ನಡೆದುಕೊಳ್ಳುವಂತೆ ದೇವೇಗೌಡ ರು ನನಗೆ ಸೂಚನೆ ನೀಡಿದರು. ಅವರ ಸೂಚನೆಯನ್ನು ಕಾಯಾ ವಾಚಾ ಅನುಸರಿಸುತ್ತೇನೆ ಎಂದು ಹೇಳಿದರು.

ಈ ಚುನಾವಣೆದೇಶದ ಭವಿಷ್ಯ ನಿರ್ಧಾರ ಮಾಡುವ ಮಹತ್ವದ ಚುನಾವಣೆ. ದೇಶದ ಆಡಳಿತ ಚುಕ್ಕಾಣಿ ಹಿಡಿದು, ಸಮರ್ಥವಾಗಿ ಮುನ್ನಡೆಸುವವರನ್ನು ಆಯ್ಕೆ ಮಾಡುವ ಚುನಾವಣೆ. ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರೇ ಮೊತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ದೇವೇಗೌಡರು, ಕುಮಾರಸ್ವಾಮಿಯವರು ತೀರ್ಮಾನ ಮಾಡಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮೋದಿಯವರ ಕೈ ಬಲಪಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಬಿಜೆಪಿ, ಜೆಡಿಎಸ್‌ನ ಎಲ್ಲರೂ ಒಟ್ಟಾಗಿ ಸೇರಿ ಮೋದಿಯವರನ್ನು ಪ್ರಧಾನಿ ಮಾಡಲು ದೇವೇಗೌಡರು, ಕುಮಾರಸ್ವಾಮಿ ಯವರ ಆಶಯ ಈಡೇರಿಸಲು ಬದ್ಧವಾಗಿದ್ದೇನೆ, ಎರಡೂ ಪಕ್ಷದವರು ಒಂದೇ ಕುಟುಂಬದ ಸದಸ್ಯರಂತೆ ಚುನಾವಣೆಯಲ್ಲಿ ಕೆಲಸ ಮಾಡೋಣ. ತುಮಕೂರಿನಲ್ಲೇ ಮನೆ ಮಾಡಿದ್ದೇನೆ, ಇಲ್ಲೇ ವಾಸ ಮಡುತ್ತೇನೆ, ನಾನು ಸದಾ ನಿಮ್ಮ ಜೊತೆಗಿರುತ್ತೇನೆ ಎಂದರು.

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಕಳೆದ ಬಾರಿ ದೇವೇಗೌಡರು ಕಾಂಗ್ರೆಸ್‌ ಜೊತೆ ಮೈತ್ರಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್‌ನವರು ಮೋಸ ಮಾಡಿ ಸೋಲಿಸಿದರು. ಆದರೆ ಜೆಡಿಎಸ್‌ನವರು ಮಾತಿಗೆ ತಪ್ಪುವುದಿಲ್ಲ, ಸೋಮಣ್ಣ ಅವರನ್ನು ಗೆಲ್ಲಿಸಲು ಒಟ್ಟಾಗಿ ಶ್ರಮಿಸುತ್ತೇವೆ ಎಂದರು. ಬೂತ್ ಮಟ್ಟದವರೆಗೆ ಎರಡೂ ಪಕ್ಷದ ಕಾರ್ಯಕರ್ತರು ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ನಿರಂತರವಾಗಿ ಕಾರ್ಯರೂಪಿಸುತ್ತಿದೆ. ಈಗ ಜೆಡಿಎಸ್‌ ಜೊತೆಯಾಗಿರುವುದು ನಮಗೆ ಆನೆಬಲ ಬಂದಂತಾಗಿದೆ ಎಂದರು.

ಲೋಕಸಭಾ ಕ್ಷೇತ್ರ ಉಸ್ತುವಾರಿ, ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಕುಡಿಯುವ ನೀರು ಕೊಡಲಾಗದ ಗ್ಯಾರಂಟಿಗಳ ಪ್ರಚಾರ ಮಾಡಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಒಕ್ಕಲಿಗರ ಸಮುದಾಯಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸಿ, ಕಳೆದು ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್‌ ಮುಖಂಡರ ಜೊತೆ ಸೇರಿ ದೇವೇಗೌಡರನ್ನು ಸೋಲಿಸಲು ಇದೇ ಮುದ್ದಹನುಮೇಗೌಡ ತಂತ್ರ ಮಾಡಿದ್ದರು ಎಂದು ಆಪಾದಿಸಿದರು

ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರುಬಿಟ್ಟರು. ರಾಜ್ಯದ ಜನರಿಗೆ ಕುಡಿಯುವ ನೀರಿಲ್ಲ, ಜನರಿಗೆ ನೀರು ಕೊಡುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಶಾಸಕರಾದ ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶ್‌ಬಾಬು, ಮಾಜಿ ಶಾಸಕರಾದ ಸುಧಾಕರಲಾಲ್, ತಿಮ್ಮರಾಯಪ್ಪ, ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿದರು.

ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಬಿಜೆಪಿ ಮಧುಗಿರಿಅಧ್ಯಕ್ಷ ಹನುಮಂತೇಗೌಡ, ಮಾಜಿ ಶಾಸಕರಾದ ಮಸಾಲೆ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ, ಜೆಡಿಎಸ್ ಮುಖಂಡರಾದಗೋವಿಂದರಾಜು, ಕೊಂಡವಾಡಿಚಂದ್ರಶೇಖರ್, ಬಿಜೆಪಿ ಮುಖಂಡರಾದ ಅನಿಲ್‌ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಎಲ್.ಸಿ.ನಾಗರಾಜು, ಡಾ.ಪರಮೇಶ್, ದಿಲೀಪ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.