ಸಾರಾಂಶ
ಹೊನ್ನಾಳಿ : ಅಲೆಮಾರಿ ಅಭಿವೃದ್ಧಿ ನಿಗಮದ ಮೂಲಕ ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಟೆಂಟ್‌ಮುಕ್ತ ಕರ್ನಾಟಕ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಕರ್ನಾಟಕ ಎಸ್‌ಸಿ- ಎಸ್‌ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ಶುಕ್ರವಾರ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ತಂಡದೊಂದಿಗೆ ಹೊನ್ನಾಳಿ ತಾಲೂಕಿನ ದೇವನಾಯ್ಕನಹಳ್ಳಿ ಪ್ರದೇಶದಲ್ಲಿ ಟೆಂಟ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯ ಜನರನ್ನು ಭೇಟಿ ಮಾಡಿ ಅವರೊಂದಿಗೆ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಲ್ಲಿ 51 ಪರಿಶಿಷ್ಟ ಜಾತಿ ಸಮುದಾಯಗಳು, 23 ಪರಿಶಿಷ್ಟ ಪಂಗಡದಲ್ಲಿ ಸಮುದಾಯಗಳಿವೆ. ಇದೇ ರೀತಿ ಅರಣ್ಯ ಆದಿವಾಸಿ ಸಮುದಾಯಗಳು 48 ಸೇರಿ ಒಟ್ಟು 122 ವಿವಿಧ ರೀತಿಯ ಜನಸಮುದಾಯಳಿವೆ. ಈ ಎಲ್ಲ ಸಮುದಾಯಗಳು ಅಲೆಮಾರಿಗಳಾಗಿದ್ದಾರೆ. ಅವರಿಗೆ ಸ್ವಂತ ನೆಲೆ ಇಲ್ಲದೇ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಈಗಾಗಲೇ ಮೈಸೂರು, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೆನೆ. ಅಲ್ಲಿ ಅಲೆಮಾರಿಗಳು ತಂಗಿರುವ ಟೆಂಟ್‌ಗಳಿಗೆ ಭೇಟಿ ಮಾಡಿ, ಸಮಸ್ಯೆಗಳ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಅಲೇಮಾರಿಗಳ ನೈಜ ಸಮಸ್ಯೆಗಳನ್ನು ಅರಿತು, ಡ್ಯಾಕ್ಯುಮೆಂಟರಿ ಮಾಡಿ, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ ಮೂಲಕ ಆದಿವಾಸಿ ಜನ ಸಮುದಾಯಗಳಿಗೆ ಶಾಶ್ವತ ನೆಲೆ ಕಲ್ಪಿಸಿ, ಕರ್ನಾಟಕವನ್ನು ಟೆಂಟ್‌ಮುಕ್ತ ರಾಜ್ಯವಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.ದೇಶದ ಇತಿಹಾಸದಲ್ಲಿ 1871ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಈ ಎಲ್ಲ ಸಮುದಾಯದವರನ್ನು ಕ್ರಿಮಿನಲ್ ಹಿನ್ನಲೆವುಳ್ಳ ಸಮುದಾಯಗಳೆಂದು ಪರಿಗಣಿಸಿ, ಬಯಲು ಬಂದೀಖಾನೆಗಳಲ್ಲಿ ಇಡುತ್ತಿದ್ದರು. ಅಂದಿನಿಂದ ಹಿಂದಿನವರೆಗೆ ಸಾಮಾಜಿಕ ಜೀವನದಲ್ಲಿ ಯಾವುದೇ ನೆಲೆಯಿಲ್ಲದೇ ಅಲೆಮಾರಿಗಳಾಗಿ ಊರೂರು ತಿರುಗಾಡುತ್ತ, ಟೆಂಟ್‌ಗಳಲ್ಲಿ ಬದುಕುವುದೇ ಇವರ ಜೀವನಶೈಲಿಯಾಗಿದೆ ಎಂದರು.
ಈ ಸಂದರ್ಭ ತಹಸೀಲ್ದಾರ್ ಪಟ್ಟರಾಜ ಗೌಡ, ತಾ.ಪಂ., ಇಒ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಉಮಾ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಸೇರಿದಂತೆ ಹಲವಾರು ಅಧಿಕಾರಿಗಳು, ಅಲೆಮಾರಿ ಕುಟುಂಬಗಳ ಜನರು ಇದ್ದರು. ಅಲೆಮಾರಿಗಳಿಗೆ ರಾತ್ರಿ ಶಾಲೆ ಸೌಲಭ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ 101 ಜನಸಮುದಾಯವನ್ನು ಗುರುತಿಸಿ, ಈ ಜನಾಂಗದ ಅಭಿವೃದ್ಧಿ ಕೋಶಕ್ಕೆ ಚಾಲನೆ ನೀಡಿದ್ದರು. ಕಳೆದ ಒಂದೂವರೆಗೆ ವರ್ಷದಿಂದ ಇದನ್ನು ಕರ್ನಾಟಕ ಪರಿಶಿಷ್ಟ, ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಲಾಗಿದೆ. ಇದರ ಪ್ರಥಮ ಅಧ್ಯಕ್ಷೆಯನ್ನಾಗಿ ತನ್ನನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಜನಸಮುದಾಯದ ಶಿಕ್ಷಣಕ್ಕೆ ಸರ್ಕಾರದೊಂದಿಗೆ ಸಮಾಲೋಚಿಸಿ, ರಾತ್ರಿ ಶಾಲೆಗಳ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಅಲ್ಲದೇ, ಕೌಶಲ್ಯಾಭಿವೃದ್ದಿ ತರಬೇತಿ ನೀಡುವುದು, ಮನೆ ನಿರ್ಮಿಸಲು ಸರ್ಕಾರದಿಂದ ₹4 ಲಕ್ಷ ಧನಸಹಾಯ ನೀಡುವ ಯೋಜನೆಗಳು ಇವೆ ಎಂದರು.