ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರಾಜಕೀಯ ನನಗೆ ಹೊಸತನವಾದರೂ ಜನಸೇವೆ ಮಾಡಲು ಹಿರಿತನದ ಅನುಭವವಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.ಹೋಬಳಿಯ ಚಿಕ್ಕತರಹಳ್ಳಿಯ ತಮ್ಮ ಮನೆದೇವರಾದ ಕೋಡಿಮಾರಮ್ಮ ಹಾಗೂ ದೊಡ್ಡತರಹಳ್ಳಿ ವೀರಭದ್ರೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಭೇಡಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿ ಮಾತನಾಡಿದರು.
ಗುರು ಹಿರಿಯರು, ರಾಜ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನತೆ, ಭಗವಂತನ ಆರ್ಶೀವಾದದಿಂದ ತಾನಿಂದು ಸಂಸದನಾಗಿದ್ದೇವೆ. ರಾಜ್ಯ, ಕ್ಷೇತ್ರದ ಜನರಿಗೆ ಚ್ಯುತಿಬಾರದಂತೆ 5 ವರ್ಷ ಕೆಲಸ ಮಾಡುತ್ತೇನೆ ಎಂದರು.ಕೇಂದ್ರದ ವಿವಿಧ ಯೋಜನೆ, ವಿಮೆ ಸೌಲಭ್ಯಗಳನ್ನು ರಾಜ್ಯದ ಜನತೆಗೆ ಮೊದಲು ಸಿಗುವಂತಾಗಬೇಕಿದೆ. ಆರೋಗ್ಯ ಸೇವೆ ಎಲ್ಲರಿಗೂ ಸುಲಭವಾಗಿ ಸಿಗಬೇಕು ಎಂಬುದು ತನ್ನ ಬಲುದಿನದ ಆಸೆಯಾಗಿದೆ. ಇದಕ್ಕಾಗಿ ಶ್ರಮಿಸುತ್ತೇನೆ ಎಂದರು.
ಪ್ರಸ್ತುತ ಮನುಷ್ಯರಿಗೆ ಆರೋಗ್ಯ ಭಾಗ್ಯ ಬಲುಮುಖ್ಯ. ಡೆಂಘೀ ಜ್ವರದ ಬಗ್ಗೆ ಆತಂಕ ಬೇಡ. ಆದರೆ, ಕಾಳಜಿ ವಹಿಸಬೇಕು. ಸುತ್ತಮುತ್ತಲ ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಮೂರು ವರ್ಷಗಳ ಹಿಂದೆ ಕೋವಿಡ್ ಆರ್ಭಟಕ್ಕೆ ಜನತೆ ನಲುಗಿದ್ದರು. ಜನತೆ ಎಚ್ಚರಿಕೆಯಿಂದ ಆರೋಗ್ಯದೆಡೆಗೆ ಗಮನಹರಿಸಬೇಕು. ಡೆಂಘೀಯಿಂದ ಮುಕ್ತವಾಗಲು ತಮ್ಮ ಮನೆ ಸುತ್ತಮುತ್ತ ಶುಚಿತ್ವಕ್ಕೆ ಗಮನ ಹರಿಸಬೇಕು. ಸೊಳ್ಳೆಪರದೆ ಬಳಸಬೇಕು ಎಂದರು.ನಿಂತ ನೀರಿಗಿಂತ ಶುದ್ಧ ನೀರಿಯಲ್ಲಿಯೇ ಡೆಂಘೀ ಸೊಳ್ಳೆ ಉತ್ಪತ್ತಿಯಾಗಲಿದೆ. ವಾರಕ್ಕೊಮ್ಮೆ ನೀರು ಬದಲಿಸಿ ಶುಚಿಗೊಳಿಸಬೇಕು. ತೆಂಗಿನಚಿಪ್ಪು, ಟೈರ್, ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ನಿತ್ಯ ನಡಿಗೆ, ವ್ಯಾಯಾಮ ಮಾಡಿದರೆ ಇದೇ ಆರೋಗ್ಯದ ಗುಟ್ಟು ಎಂದು ಮಾಹಿತಿ ನೀಡಿದರು.
ಕುಟುಂಬಸ್ಥರು ಎರಡು ಗ್ರಾಮಗಳ ದೇವರಾದ ಕೋಡಿಮಾರಮ್ಮ ಹಾಗೂ ವೀರಭದ್ರೇಶ್ವರ ದೇವಾಲಯಕ್ಕೆ ಆಗಮಿಸಿ ಇಷ್ಟಾರ್ಥ ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಲಾಗಿದೆ ಎಂದರು.ಇದೇ ವೇಳೆ ಸಂಸದ ಡಾ.ಸಿ.ಎನ್.ಮಂಜುನಾಥ್, ಡಾ.ಎಚ್.ಡಿ.ಅನುಸೂಯ, ತಾಯಿ ಸೊಂಭಮ್ಮ, ಶ್ವೇತಾ ಸಾತ್ವಿಕ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಕುಸುಮ ಬಾಲಕೃಷ್ಣ, ಶುಭಾ ಪುಟ್ಟಸ್ವಾಮಿಗೌಡ, ಪುಟ್ಟಸ್ವಾಮಿಗೌಡ, ಪುಟ್ಟತಾಯಮ್ಮ, ರಾಮಕೃಷ್ಣೇಗೌಡ, ಬಿ.ಎಸ್.ಮಂಜುನಾಥ್, ಮಧು, ಪಾರ್ವತ ರಾಜು, ಸಿ.ಪಿ.ಕಾರ್ತಿಕ್, ಜಯದೀಪ್, ಸಿ.ಬಿ. ರಂಗಸ್ವಾಮಿ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))