ಸಾರಾಂಶ
ಬೆಂಗಳೂರು : ಬಿಜೆಪಿ ಮುಖಂಡ ದೇವರಾಜೇಗೌಡರ ಜೊತೆ ನಾನು ಬರೀ ಅರ್ಧ ನಿಮಿಷ ಮಾತನಾಡಿದ್ದೇನೆ ಅಷ್ಟೇ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತು ದೇವರಾಜೇಗೌಡ ನಡುವಿನ ವೈರಲ್ ಆಡಿಯೋ ಸಂಭಾಷಣೆಯಲ್ಲಿ ತಮ್ಮ ಧ್ವನಿಯೂ ಇದೆ ಎಂದು ಸುದ್ದಿಗಾರರು ಪ್ನಶ್ನಿಸಿದಾಗ, ‘ಅನೇಕ ಮಾಹಿತಿಗಳನ್ನು ನೀಡಲು ಎಲ್ಲಾ ಪಕ್ಷದವರು, ಅಧಿಕಾರಿಗಳು, ನಾಗರಿಕರು ನನ್ನ ಮನೆಗೆ ಬರುತ್ತಾರೆ. ಭೇಟಿಗೆ ಸಮಯಾವಕಾಶ ಕೇಳುತ್ತಾರೆ. ಅದೇ ರೀತಿ ದೇವರಾಜೇಗೌಡ ಕೂಡ ಟೈಮ್ ಕೇಳಿದ್ದರು. ಆದರೆ, ನಾನು ಟೈಮ್ ಕೊಡಲಿಲ್ಲ. ಫೋನಲ್ಲಿ ಅರ್ಧ ನಿಮಿಷ ಮಾತನಾಡಿದ್ದೇನೆ’ ಎಂದರು.
ದೇವೇಗೌಡರ ಕುಟುಂಬವನ್ನು ಮಟ್ಟಹಾಕಲು ಸರ್ಕಾರ ನಿರ್ಧರಿಸಿದೆ ಎಂದು ವೈರಲ್ ಆಡಿಯೋದಲ್ಲಿರುವ ಶಿವರಾಮೇಗೌಡ ಹೇಳಿಕೆ ಬಗ್ಗೆ, ‘ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ದೇವೇಗೌಡರ ಪರಿಸ್ಥಿತಿ ನೋಡಿ ನನಗೆ ಅಯ್ಯೋ ಎನಿಸುತ್ತಿದೆ. ಅವರು ಆ ನೋವಿನಿಂದ ಆದಷ್ಟು ಬೇಗ ಹೊರಬರಲಿ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
1 ವರ್ಷದ ಕೆಲಸಕ್ಕೆ ತೃಪ್ತಿ: ರಾಜ್ಯ ಸರ್ಕಾರದ ಒಂದು ವರ್ಷದ ಆಡಳಿತದ ಬಗ್ಗೆ ಜನರಿಗೆ ತೃಪ್ತಿ ಇದೆ. ಗ್ಯಾರಂಟಿ ಜೊತೆಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ. ಚುನಾವಣೆಯಲ್ಲಿ ಜನರು ನಮಗೆ ಆಶೀರ್ವಾದ ಮಾಡುತ್ತಾರೆ. ಹೆಣ್ಣುಮಕ್ಕಳ ಜೀವನದಲ್ಲಿ ನಾವು ಬದಲಾವಣೆ ತಂದಿದ್ದೇವೆ. ಅವರೇ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಕೇವಲ ವಿರೋಧ ಮಾಡಲೆಂದು ಸರ್ಕಾರದ ಸಾಧನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.